ನೂತನವಾಗಿ ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 60 ಬೆಡ್‌ಗಳ ಈ ಸರ್ಕಾರಿ ಆಸ್ಪತ್ರೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ. ಸುಧಾಕರ್ ಇಬ್ಬರ ನಡುವಿನ ವೈಮನಸ್ಸಿಗೆ ಉದ್ಘಾಟನೆಯಾಗುವ ಮುನ್ನವೇ ಬಲಿಯಾಗುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.
ಅರುಣ್ ಕುಮಾರ್ ಎಸ್ ವಿ
ಕನ್ನಡಪ್ರಭ ವಾರ್ತೆ ಮಂಚೇನಹಳ್ಳಿತಾಲೂಕಿನ ಗಿಡಗಾನಹಳ್ಳಿ ಬಳಿ ಉದ್ಘಾಟನೆಗೆ ಮುನ್ನವೇ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಇದು ಅಕ್ರಮ ಚಟುವಟಿಕೆಗಳ ತಾಣವಾಗಿದೆ.ನೂತನವಾಗಿ ಸುಮಾರು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 60 ಬೆಡ್‌ಗಳ ಈ ಸರ್ಕಾರಿ ಆಸ್ಪತ್ರೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ. ಸುಧಾಕರ್ ಇಬ್ಬರ ನಡುವಿನ ವೈಮನಸ್ಸಿಗೆ ಉದ್ಘಾಟನೆಯಾಗುವ ಮುನ್ನವೇ ಬಲಿಯಾಗುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಜನರ ತೆರಿಗೆ ಹಣದಿಂದ, ಜನರ ಆರೋಗ್ಯಕ್ಕಾಗಿ ನಿರ್ಮಾಣವಾಗಬೇಕಾದ ಆಸ್ಪತ್ರೆ ಕಟ್ಟಡ ಇಂದು ಅರ್ಧಕ್ಕೆ ನಿಂತ ಶವದಂತಿದೆ. ಗೋಡೆಗಳಿವೆ ಆದರೆ ಸೇವೆ ಇಲ್ಲ. ಕೊಠಡಿಗಳಿವೆ ಆದರೆ ರೋಗಿಗಳು ಇಲ್ಲ, ಇತ್ತ ಚಿಕಿತ್ಸೆ ನಡೆಯುತ್ತಿಲ್ಲ. ಇದರ ಹಿಂದೆ ಇರುವ ಕಾರಣ ಏನು ಎಂದರೆ ಪುಂಡು ಪೋಕಿರಿಗಳ ದಾದಾಗಿರಿ ಮತ್ತು ರಾಜಕೀಯ ನಾಯಕರ ಸ್ವಾರ್ಥದ ಕಾಳಗ ಎಂದು ಸ್ಥಳೀಯುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಕಟ್ಟಡದ ಕೆಲಸ ಮುಗಿದರೂ, ವಿದ್ಯುತ್ ಸಂಪರ್ಕ ಇಲ್ಲ, ನೀರಿನ ವ್ಯವಸ್ಥೆ ಇಲ್ಲ, ಸಿಬ್ಬಂದಿ ನೇಮಕ ಇಲ್ಲ ಎಂಬ ನೆಪ ಹೇಳಲಾಗುತ್ತಿದೆ.ಒಂದು ಕಡೆ ಆಸ್ಪತ್ರೆಗೆ ಗರ್ಭಿಣಿಯರು, ಅಪಘಾತ ಪೀಡಿತರು, ವೃದ್ಧರು, ಬಡ ರೋಗಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ, ಇತ್ತ ನೋಡಿದರೆ ಆಸ್ಪತ್ರೆ ಮಾತ್ರ ಹಾಗೆ ಉಳಿದಿದೆ. ಹೆಸರಿಗೆ ಮಾತ್ರ ಮಂಚೇನಹಳ್ಳಿ ತಾಲೂಕು ಮೇಲದರ್ಜೆಗೆ ಏರಿದ್ದು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಜನರ ಜೀವದೊಂದಿಗೆ ನಡೆಯುತ್ತಿರುವ ಕ್ರೂರ ಆಟ. ಆಸ್ಪತ್ರೆ ಕಟ್ಟಡವನ್ನು ಉದ್ಘಾಟನೆ ಮಾಡಬೇಕಾದ ಪರಿಕರಗಳನ್ನು ಒದಗಿಸುವಲ್ಲಿ ಸ್ಥಳೀಯ ಶಾಸಕ, ಸಂಸದರು, ಮತ್ತು ಉಸ್ತುವಾರಿ ಸಚಿವರು, ಅಧಿಕಾರಿಗಳು ವಿಫಲರಾಗಿರುವುದು ಕಂಡುಬರುತ್ತಿದೆ.ರಾಜ್ಯ ಸರ್ಕಾರ ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಸುಸೂತ್ರವಾಗಿ ನಡೆಯುತ್ತಿದೆ. ಆದರೆ ಆರೋಗ್ಯದ ಕಡೆ ಸರ್ಕಾರ ಮತ್ತು ಅಧಿಕಾರಿಗಳು ಹಲವು ಬಗೆಯ ಜಾಗೃತಿ ಕಾರ್ಯಕ್ರಮಗಳು ಇತರೆ ಕಾರ್ಯಗಳು ಮಾಡುತ್ತಲೇ ಇರುತ್ತಾರೆ. ಆದರೆ ಈ ಒಂದು ಆಸ್ಪತ್ರೆಯ ಕಟ್ಟಡ ಮಾತ್ರ ಹೀಗೆಯೇ ಉಳಿದಿದೆ.ಪ್ರತಿ ಚುನಾವಣೆಯಲ್ಲೂ “ಆಸ್ಪತ್ರೆ ಕೊಡ್ತೀವಿ”, “ಆರೋಗ್ಯ ಸೇವೆ ಸುಧಾರಣೆ ಮಾಡ್ತೀವಿ” ಎಂದು ಭಾಷಣ ಮಾಡುವ ಜನಪ್ರತಿನಿಧಿಗಳು, ಇಂದು ಆಸ್ಪತ್ರೆ ಬಾಗಿಲು ತೆಗೆಯಲು ಸಹ ಆಸಕ್ತಿ ತೋರಿಸುತ್ತಿಲ್ಲ. ವೋಟು ಬೇಕಾದಾಗ ಜನರ ಬಳಿ ಬಂದು ಕುಳಿತು ಹೋಗುವುದೇ ಹೊರತು ಅವರಿಗೆ ಬೇಕಾದ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ.ಕೋಟ್.....
ಆಸ್ಪತ್ರೆ ನಿರ್ಮಾಣ ಆಗಿ ನಾಲ್ಕು ವರ್ಷ ಆಗುತ್ತಿದೆ. ಉದ್ಘಾಟನಾ ಭಾಗ್ಯ ಇದುವರೆಗೂ ಸಿಕ್ಕಿಲ್ಲ. ಅನೈತಿಕ ಚಟುವಟಿಕೆಯ ತಾಣವಾಗಿದೆ. ಮಂಚೇನಹಳ್ಳಿ ತಾಲೂಕು ಕೇಂದ್ರವಾಗಿದೆ, 65 ಹಳ್ಳಿಗಳು ಸೇರುತ್ತದೆ, ಶಾಸಕರು ಮತ್ತು ಸಚಿವರು ಗಮನಹರಿಸಬೇಕು, ಭೂತ ಬಂಗಲೆ ಆಗುವ ಮುಂಚೆಯೇ ಉದ್ಘಾಟನೆ ಆದರೆ ಒಳ್ಳೆಯದು.-ಜಬಿವುಲ್ಲಾ, ಮಂಚೇನಹಳ್ಳಿ ಗ್ರಾಪಂ ಮಾಜಿ ಸದಸ್ಯ .......
ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಇದುವರೆಗೂ ಏನು ಸೌಕರ್ಯವಿಲ್ಲ. ಬಡಬಗ್ಗರಿಗೆ ತೀವ್ರ ತೊಂದರೆಯಾಗುತ್ತಿದೆ, ಆಸ್ಪತ್ರೆಗೆ ಹೋಗಬೇಕಾದರೆ ಬಸ್ ವ್ಯವಸ್ಥೆ ಸರಿಯಾಗಿ ಇಲ್ಲ, ಆ್ಯಂಬುಲೆನ್ಸ್ ಇದ್ದರೂ ಕೂಡ ಪ್ರಯೋಜನವಿಲ್ಲ, 60ಕ್ಕೂ ಹೆಚ್ಚು ಹಳ್ಳಿ ನಮ್ಮ ತಾಲೂಕಿಗೆ ಸೇರುತ್ತದೆ, ಆದಷ್ಟು ಬೇಗ ಉದ್ಘಾಟನೆ ಭಾಗ್ಯ ಸಿಗಲಿ.-ನಾರಾಯಣಪ್ಪ ಮಂಚೇನಹಳ್ಳಿ ಗ್ರಾಪಂ ಸದಸ್ಯರು......
ಈ ಬಗ್ಗೆ ನನಗೆ ಮಾಹಿತಿ ಇಲ್ಲ, ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ವಾಟ್ಸಪ್ ಮಾಡಿ, ನಾನು ತಿಳಿಸುತ್ತೇನೆ, ಈ ರೀತಿ ಘಟನೆಗಳು ಯಾವುದು ನನ್ನ ಗಮನಕ್ಕೆ ಬಂದಿಲ್ಲ, ನಾನು ಇಲ್ಲಿಗೆ ಬಂದು ನಾಲ್ಕು ತಿಂಗಳಾಗಿದೆ.-ಪೂರ್ಣಿಮಾ, ಮಂಚೇನಹಳ್ಳಿ ತಹಸೀಲ್ದಾರ್