ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜೀವಗಳ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜೀವಗಳ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಸಲಹೆ ನೀಡಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜನವರಿ-2026ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಸ್ತೆ ಸುರಕ್ಷತೆ ಎಂದರೆ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರು ಸುರಕ್ಷತೆ ಕಾಪಾಡಿಕೊಳ್ಳುವುದೇ ಆಗಿದೆ. ವಾಹನಗಳು ಹೆಚ್ಚಾದಷ್ಟು ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಸ್ತೆ ಸುರಕ್ಷತಾ ಸಂಚಾರ ನಿಯಮಗಳನ್ನು ಪಾಲಿಸದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಕೆಲವರಿಗೆ ಸಂಚಾರಿ ನಿಯಮಗಳ ಅರಿವು ಇದ್ದರೂ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಪಘಾತಗಳು ಅಕಸ್ಮಿಕವೇ ಹೊರತು ಉದ್ದೇಶಪೂರ್ವಕವಲ್ಲ. ಅಪಘಾತದಿಂದ ವ್ಯಕ್ತಿಯ ಕುಟುಂಬ ಬೀದಿಗೆ ಬರಲಿದೆ. ಈ ನಿಟ್ಟಿನಲ್ಲಿ ವಾಹನ ಚಾಲನೆ ಮಾಡುವ ಪ್ರತಿಯೊಬ್ಬರಿಗೂ ತಾಳ್ಮೆ ಹಾಗೂ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ಪ್ರತಿವರ್ಷ ಜನವರಿ ಮಾಹೆ ಅಂತ್ಯದವರೆಗೂ ವಿವಿಧ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ವಾಹನ ಚಾಲಿಸುವ ಪ್ರತಿಯೊಬ್ಬರು ಚಾಲನಾ ಪರವಾನಗಿ, ವಿಮಾ ಪಾಲಿಸಿ, ವಾಹನ ನೊಂದಣಿ ಪತ್ರ, ವಾಯುಮಾಲಿನ್ಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿರಬೇಕು ಎಂದು ಹೇಳಿದರು.

ನಿಗದಿತ ಮಿತಿಯಲ್ಲಿ ವಾಹನ ಚಾಲಿಸಬೇಕು. ಹೆದ್ದಾರಿಗಳಲ್ಲಿ ಇಂಡಿಕೇಟರ್ ಹಾಕಬೇಕು. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಬಾರದು. ಸಿಗ್ನಲ್ ಜಂಪ್ ಹಾಗೂ ತ್ರಿಬಲ್ ರೈಡಿಂಗ್ ಮಾಡಬಾರದು. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಬಾರದು. ರಸ್ತೆ ಅಪಘಾತಗಳನ್ನು ತಡೆಯಲು ಪ್ರಜ್ಞಾವಂತ ನಾಗರಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಮಾತನಾಡಿ, ಹೆಚ್ಚಾಗುತ್ತಿರುವ ರಸ್ತೆ ಅಪಘಾತಗಳ ಪರಿಣಾಮಕಾರಿ ತಡೆಗೆ ಸಾರಿಗೆ ಇಲಾಖೆ ವತಿಯಿದ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸಂತೆ, ಜಾತ್ರೆ, ರೈಲು ಹಾಗೂ ಬಸ್ ನಿಲ್ದಾಣದಂತಹ ಹೆಚ್ಚು ಜನಸಂದಣಿ ಇರುವ ಸ್ಥಳದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. 2024ರಲ್ಲಿ 769 ಅಪಘಾತ ಪ್ರಕರಣಗಳಲ್ಲಿ 256 ಜನ ಮೃತರಾಗಿದ್ದು, 1130 ಮಂದಿ ಗಾಯಗೊಂಡಿದ್ದಾರೆ. 2025ರಲ್ಲಿ 821 ಪ್ರಕರಣಗಳಲ್ಲಿ 242 ಜನ ಮೃತರಾಗಿದ್ದು, 1274 ಮಂದಿ ಗಾಯಗೊಂಡಿದ್ದಾರೆ. ಒಟ್ಟಿನಲ್ಲಿ ಚಾಮರಾಜನಗರವನ್ನು ಅಪಘಾತ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಗಿರೀಶ್ ಅವರು ಹಿಂದೆ ಪ್ರತಿ ಮನೆಗಳಲ್ಲಿ ಸೈಕಲ್‌ಗಳಿತ್ತು. ಬದಲಾದ ಇಂದಿನ ದಿನಗಳಲ್ಲಿ 2-3 ಸ್ಕೂಟರ್ ಹಾಗೂ ಕಾರುಗಳನ್ನು ಹೊಂದುವುದು ಜನರಿಗೆ ಸಾಮಾಜಿಕ ಪ್ರತಿಷ್ಠೆಯಾಗಿದೆ. ವಾಹನಗಳು ಹೆಚ್ಚಾದಂತೆ ಅಪಘಾತಗಳು ಹೆಚ್ಚಾಗುವುದು ಸರ್ವೇ ಸಾಮಾನ್ಯವಾಗಿದೆ. ಅವಸರವೇ ಅಪಘಾತಕ್ಕೆ ಕಾರಣವಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸುವಂತೆ ಪೋಷಕರೇ ಪ್ರೇರೇಪಿಸುವಂತಹ ವಾತಾವರಣ ಸೃಷ್ಠಿಯಾಗಿದೆ. ಇದು ಸಲ್ಲದು. ರಸ್ತೆ ಸುರಕ್ಷತೆಗೆ ಅನೇಕ ಸಂಚಾರಿ ನಿಯಮಗಳಿದ್ದರೂ ಅವುಗಳ ಪಾಲನೆಯಾಗುತ್ತಿಲ್ಲ. ಇದು ದುರಂತವೇ ಸರಿ. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ತಿಳಿಹೇಳಬೇಕು ಎಂದು ಹೇಳಿದರು.

ಇದೇ ವೇಳೆ ರಸ್ತೆ ಸುರಕ್ಷತೆಯ ಸಂಚಾರಿ ನಿಯಮಗಳ ಜಾಗೃತಿ ಕುರಿತ ಪೋಸ್ಟರ್ ಹಾಗೂ ಭಿತ್ತಿಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಹಿರಿಯ ಮೋಟಾರು ವಾಹನ ನಿರೀಕ್ಷಕ ಯೋಗೇಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತತರಾದ ಶಾಂತಮ್ಮ, ಪಟ್ಟಣದ ಸಂಚಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತ ಉಪ್ಪಾರ್, ಆರೋಗ್ಯ ಇಲಾಖೆಯ ಸಂತೋಷ್, ಮೋಟಾರು ವಾಹನ ನಿರೀಕ್ಷಕಿ ರಶ್ಮಿ, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀಕ್ಷಕ ಕಮರಶೆಟ್ಟಿ, ದೀಪಾ, ರೋಟರಿ ಸಿಲ್ಕ್ಸಿಟಿ ಮಾಜಿ ಅಧ್ಯಕ್ಷ ಮಾಣಿಕ್‌ಚಂದ್ ಶಿರ್ವಿ, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ ಮಹದೇವಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.