ವಿದ್ಯಾರ್ಥಿಗಳ ಜ್ಞಾನಕ್ಕೆ ಪೂರಕ ಕಲಿಕಾ ಹಬ್ಬ: ಬಿ.ಎಂ.ಕಿರಣ್

| Published : Feb 20 2025, 12:45 AM IST

ಸಾರಾಂಶ

ಕ್ಲಸ್ಟರ್‌ ಮಟ್ಟದ ವಿವಿಧ ಶಾಲೆಗಳಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಒಂದೆಡೆ ಕಲೆ ಹಾಕಿ ಉತ್ತೇಜಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ . ಸರ್ಕಾರಿ ಶಾಲೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿನೂತನ ಪ್ರಯೋಗ ಇದಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪುನಶ್ಚೇತನಗೊಳಿಸಲು ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಸುಬ್ರಹ್ಮಣ್ಯ ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಎಂ.ಕಿರಣ್ ಹೇಳಿದರು.

ಪಟ್ಟಣದ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬದಲ್ಲಿ ಮಾತನಾಡಿ, ಕ್ಲಸ್ಟರ್‌ ಮಟ್ಟದ ವಿವಿಧ ಶಾಲೆಗಳಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಒಂದೆಡೆ ಕಲೆ ಹಾಕಿ ಉತ್ತೇಜಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ . ಸರ್ಕಾರಿ ಶಾಲೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿನೂತನ ಪ್ರಯೋಗ ಇದಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಮಾತನಾಡಿ, 1 ರಿಂದ 5 ತರಗತಿಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಇರುವ ಹಬ್ಬದಲ್ಲಿ ಮಕ್ಕಳು ಸಂಭ್ರಮಿಸುವ ವಾತಾವರಣವಿದೆ. ಮಕ್ಕಳು ಚಿತ್ರಪಟ, ಕ್ರೀಡೆಗಳ ಮೂಲಕ ಸರಳವಾಗಿ ಕಲಿಯುವಂತೆ ಮಾಡುವ ಕ್ರಿಯಾಶೀಲ ಚಟುವಟಿಕೆ ಮಕ್ಕಳಿಗೆ ಜ್ಞಾಪಕಶಕ್ತಿ ವೃದ್ಧಿಸುವಂತಿದೆ ಎಂದರು.

ಇದೇ ವೇಳೆ ಕ್ಲಸ್ಟರ್ ವಿಭಾಗದ ಸೊಳ್ಳೇಪುರ, ಜಕ್ಕನಹಳ್ಳಿ, ಶಟ್ಟಹಳ್ಳಿ, ಕೋಡಿಮಾರನಹಳ್ಳಿ, ಕಾರಿಗಾನಹಳ್ಳಿ, ಮಾಣಿಕನಹಳ್ಳಿ, ರಾಮನಹಳ್ಳಿ ಸೇರಿದಂತೆ ವಿವಿಧ ಶಾಲೆಗಳಿಂದ ಮಕ್ಕಳು ಭಾಗವಹಿಸಿದ್ದರು.

ಗಟ್ಟಿ ಓದು, ಸ್ಪಷ್ಟ ಬರಹ, ಕಥೆ ಓದು, ಸಂತೋಷದಾಯಕ ಗಣಿತ, ಜ್ಞಾಪಕ ಶಕ್ತಿಗಾಗಿ ಕೌಶಲತೆ, ಪೋಷಕ ಕಲಿಕೆಯಲ್ಲಿ ಹಿಂದುಳಿದ ವಿಷಯಗಳಿಗೆ ಪರಿಹಾರ ಕಂಡುಕೊಂಡು ಖುಷಿಪಟ್ಟರು. ಭಾಗವಹಿಸಿದ್ದ ಎಲ್ಲ ಮಕ್ಕಳಿಗೆ ಬಹುಮಾನ ವಿತರಿಸಿ ಉತ್ತೇಜಿಸಲಾಯಿತು.

ಗಣ್ಯರು ಕಾಗದದಲ್ಲಿ ನಿರ್ಮಿಸಿದ್ದ ಓರಿಗಾಮೆ ಟೋಪಿಗಳನ್ನು ಹಾಕಿಕೊಂಡು ಮಕ್ಕಳೊಂದಿಗೆ ಸಂಭ್ರಮಿಸಿದರು. ತಾಲೂಕು ದೈಹಿಕ ಶಿಕ್ಷಣಪರಿವೀಕ್ಷಕ ಪ್ರಭುಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್, ಬಿಆರ್‌ಪಿ ಚಂದ್ರು, ಬಿಆರ್‌ಪಿ ನವೀನಕುಮಾರ್, ಸಿಆರ್‌ಪಿ ನಾರಾಯಣ್, ರಾಮಚಂದ್ರು, ಮುಖ್ಯಶಿಕ್ಷಕಿ ಪುಷ್ಪಾ, ಕೆ.ಎಚ್.ಭಾರತಿ ಇದ್ದರು.