ಸಾರಾಂಶ
ಚಾಮರಾಜನಗರದಲ್ಲಿ ಬಂಡಿಗೆರೆ ಗ್ರಾಮದ ಸುಶೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜೀವ್‌ಗಾಂಧಿ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಆದೇಶ ನೀಡಿ ಮನೆ ನಿರ್ಮಿಸಿದ ನಂತರ ಬಿಲ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಫಲಾನುಭವಿ ಬಂಡಿಗೆರೆ ಗ್ರಾಮದ ಸುಶೀಲ ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಮಳೆಯಿಂದ ಮನೆ ಬಿದ್ದುಹೋಗಿದ್ದು, ಮನೆ ನಿರ್ಮಿಸಿಕೊಳ್ಳಲು ಹರದನಹಳ್ಳಿ ಗ್ರಾಪಂನಿಂದ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.
ಆದೇಶ ಪತ್ರ ಬಂದ ನಂತರ ಸಾಲ ಮಾಡಿ ಮನೆ ನಿರ್ಮಿಸಲು ಮುಂದಾಗಿ ಅಡಿಪಾಯ ಹಾಕಿದಾಗ ಗ್ರಾಪಂನಿಂದ ಮೊದಲ ಹಂತದ ಹಣ ನೀಡಲು ಮನವಿ ನೀಡಿದೇವು. ಆಗ ಗ್ರಾಪಂನಲ್ಲಿ ಗೋಡೆ ನಿರ್ಮಿಸಿ ಎರಡು ಹಂತದ ಹಣವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಮತ್ತೇ ಸಾಲ ಮಾಡಿ ಗೋಡೆ ನಿರ್ಮಿಸಿ ಗ್ರಾಪಂಗೆ ಹೋದಾಗ ಸೀಟ್ ಹಾಕಿ ಒಟ್ಟಿಗೆ ಎಲ್ಲಾ ಹಣ ಕೊಡಿಸುತ್ತೇವೆ ಎಂದರು. ಸೀಟ್ ಸಹ ಹಾಕಿದ್ದೇವೆ. ಗ್ರಾಪಂನಿಂದ ಬಿಲ್ ಮಾಡಿಕೊಡದೇ ಈಗ ಸಾಲದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡರು.ಗ್ರಾಪಂ ಕಚೇರಿಗೆ ಹೋಗಿ ಬಿಲ್ ಮಾಡಲು ತಡ ಏಕೆ ಮಾಡಲಾಗಿದೆ ಬಿಲ್ ಮಾಡಿಕೊಡಿ ಎಂದು ಕೇಳಿದಾಗ 15 ಸಾವಿರ ರು. ಲಂಚ ಕೇಳಿದ್ದು, ಗ್ರಾಪಂ ಅಧ್ಯಕ್ಷ ಮಂಜುನಾಥ್ ಅವರು ದಬ್ಬಾಳಿಕೆ ನಡೆಸಿದ್ದಾರೆ. ಬಿಲ್ ಹೇಗೆ ಮಾಡಿಸಿಕೊಳ್ಳುತ್ತೀಯಾ ನೋಡುತ್ತೇನೆ ಎಂದು ಸವಾಲು ಹಾಕಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂನಲ್ಲಿರುವ ಪಿಡಿಒ ಮಹೇಶ್ವರಿ ಅವರು ಬೆಂಗಳೂರಿನಲ್ಲಿ ನಿಮ್ಮ ಬಿಲ್ ಲಾಕ್ ಆಗಿದೆ. ಒಂಬೂಡ್ಸ್‌ಮನ್ ಅವರನ್ನು ಸಂಪರ್ಕಿಸಿ ಎಂದು ಸಬೂಬೂ ಹೇಳುತ್ತಿದ್ದಾರೆ. ಮನೆಯಲ್ಲಿರುವ ಪತಿಗೆ ಕಾಲು ಮುರಿದು ದುಡಿಯಲಾಗದ ಸ್ಥಿತಿಯಲ್ಲಿದ್ದಾರೆ. ಎರಡು ಮಕ್ಕಳು ಹಾಗೂ ವಯಸ್ಸಾದವರೊಬ್ಬರು ಮನೆಯಲ್ಲಿದ್ದು, ಜೀವನ ನಿರ್ವಾಹಣೆಯೇ ಕಷ್ಟವಾಗಿದೆ. ಸಾಲ ಸೋಲ ಮಾಡಿ ಮನೆ ನಿರ್ಮಿಸಿರುವುದರಿಂದ ಸಾಲ ಕೊಟ್ಟವರಿಗೆ ಸಾಲ ಹಿಂತಿರುಗಿಸಬೇಕಿದೆ ದಯಮಾಡಿ ಅಧಿಕಾರಿಗಳು ಗ್ರಾಪಂನಿಂದ ಬಿಲ್ ಮಾಡಿಸಿಕೊಡಿ ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕುಟುಂಬಸ್ಥರಾದ ಮಾದಮ್ಮ, ಮಹೇಶ್, ಮಣಿಕಂಠ ಇದ್ದರು.