ಒಳಮೀಸಲಾತಿ ಜಾರಿಗಾಗಿ ಎ. ನಾರಾಯಣಸ್ವಾಮಿ ಆಗ್ರಹ

| Published : Jul 17 2025, 12:37 AM IST

ಸಾರಾಂಶ

ಆ.೧ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ, ಸರ್ಕಾರ ಅದಕ್ಕೂ ಪ್ರತಿಕ್ರಿಯೆ ನೀಡದಿದ್ದರೆ ಆ.೧೦.೧೫ರಂದು ರಾಜ್ಯದ ಎಲ್ಲಾ ಮಾದಿಗ ಸಂಘಟನೆಯ ಮುಖಂಡರೊಂದಿಗೆ ಚರ್ಚಸಿ, ಅಸಹಕಾರ ಚಳವಳಿ ನಡೆಸಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆಗ್ರಹಿಸಿದರು.

ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಅನ್ಯ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿಯಾದರೂ ಕರ್ನಾಟಕದಲ್ಲಿ ಇನ್ನೂ ಜಾರಿಯಾಗದಿರುವುದು ಅನುಮಾನಾಸ್ಪದವಾಗಿದೆ, ಪಾರದರ್ಶಕತೆಯಿಂದ ಜಾತಿ ಸಮೀಕ್ಷೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಮೀಸಲಾತಿಗಳಲ್ಲಿ ವಂಚಿತರಾಗಿರುವ ವರ್ಗಗಳನ್ನು ಗುರುತಿಸಬೇಕು, ಕಳೆದ ಮೂರು ದಶಕಗಳಿಂದ ಅನೇಕ ರಾಜಕೀಯ ಪಕ್ಷಗಳು ಒಳ ಮೀಸಲಾತಿ ಮಾಡುತ್ತೇವೆ ಎಂದು ದಿಕ್ಕು ತಪ್ಪಿಸುತ್ತಿವೆ. ಅದರಂತೆ ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಹ ದಿಕ್ಕು ತಪ್ಪಿಸುವ ಅನುಮಾನವಿದೆ ಎಂದು ವಾಗ್ದಾಳಿ ನಡೆಸಿದರು.

ಆ.೧ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ, ಸರ್ಕಾರ ಅದಕ್ಕೂ ಪ್ರತಿಕ್ರಿಯೆ ನೀಡದಿದ್ದರೆ ಆ.೧೦.೧೫ರಂದು ರಾಜ್ಯದ ಎಲ್ಲಾ ಮಾದಿಗ ಸಂಘಟನೆಯ ಮುಖಂಡರೊಂದಿಗೆ ಚರ್ಚಸಿ, ಅಸಹಕಾರ ಚಳವಳಿ ನಡೆಸಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶೋಷಿತರ ನೋವು ಸಮಾಜಕ್ಕೆ ಗೊತ್ತಾಗಬೇಕು , ಒಳ ಮೀಸಲಾತಿ ವಿಚಾರದಲ್ಲಿ ಇದುವರೆಗೂ ಕಾಂಗ್ರೆಸ್ ಸರ್ಕಾರ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಪ್ರಾಯೋಗಿಕ ಅಂಕಿ- ಅಂಶಗಳನ್ನು ಸರ್ಕಾರ ಸಂಗ್ರಹಿಸಲು ವಿಫಲವಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ನಿರ್ಲಕ್ಷಿಸುವ ಅನುಮಾನವಿದೆ, ಆಗಸ್ಟ್ ೧ ರಿಂದ ೧೫ ರ ಒಳಗೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಬೇಕು, ಇಲ್ಲದಿದ್ದರೆ ಮಾದಿಗರ ಶಕ್ತಿಯನ್ನು ಸರ್ಕಾರಕ್ಕೆ ತೋರಿಸುತ್ತೇವೆ ಎಂದರು.

ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬುಳ್ಳಳ್ಳಿ ರಾಜಪ್ಪ, ದೇವರಾಜ್, ವೇಣು , ಕುಮಾರ್ , ವಿಜಯ್ ಕುಮಾರ್ ಸೇರಿ ಮಾದಿಗ ದಂಡೋರದ ಹಲವಾರು ಮುಖಂಡರು ಭಾಗಿಯಾಗಿದ್ದರು.