ಸಾರಾಂಶ
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರೈಲ್ವೆ ಪೊಲೀಸ್, ಅಗ್ನಿಶಾಮಕದಳ, ವಿಧಿವಿಜ್ಞಾನ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಗಳು ಅಣಕು ಕಾರ್ಯಾಚರಣೆ ನಡೆಸಿದವು.
ದಾವಣಗೆರೆ : ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರೈಲ್ವೆ ಪೊಲೀಸ್, ಅಗ್ನಿಶಾಮಕದಳ, ವಿಧಿವಿಜ್ಞಾನ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಶ್ವಾನದಳ, ವಿಧ್ವಂಸಕ ತಡೆ ತಪಾಸಣಾ ತಂಡದ ಅಧಿಕಾರಿಗಳು, ಸಿಬ್ಬಂದಿ ಅಣಕು ಕಾರ್ಯಾಚರಣೆ ಪ್ರದರ್ಶನ ನಡೆಸಿದರು.
ಅಣಕು ಕಾರ್ಯಾಚರಣೆ ಹೇಗಿತ್ತು?:
ರೈಲ್ವೆ ಫ್ಲಾಟ್ ಫಾರಂ-1ರ ವಿಶ್ರಾಂತಿ ಕೊಠಡಿ ಹತ್ತಿರ ಮೂರು ಬ್ಯಾಗ್ ಇದ್ದವು. ಆರ್‌ಪಿಎಫ್ ಮುಖ್ಯ ಪೇದೆ ಜಗದೀಶ್ ಮತ್ತು ಸಿಬ್ಬಂದಿ ನಿಲ್ದಾಣದ ಗಸ್ತು ತಿರುಗುವಾಗ ಬ್ಯಾಗ್‌ಗಳನ್ನು ಗಮನಿಸಿದರು. ಅನುಮಾನಸ್ಪದ ಬ್ಯಾಗ್‌ಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು. ಸ್ಥಳಕ್ಕೆ ಕೂಡಲೇ ಆಗಮಿಸಿದ ಪೋಸ್ಟ್ ಕಮಾಂಡರ್ ಬಿ.ಎನ್.ಕುಬೇರಪ್ಪ, ನಿರೀಕ್ಷಕ ಸಂತೋಷ್ ಪಾಟೀಲ್ ಇತರೆ ಅಧಿಕಾರಿಗಳು, ಸಿಬ್ಬಂದಿ ಅಲ್ಲಿದ್ದವರನ್ನ ತೆರೆವುಗೊಳಿಸಿ, ಬಂದೋಬಸ್ತ್ ಏರ್ಪಡಿಸಿದರು. ಅಗ್ನಿಶಾಮಕ ಅಧಿಕಾರಿ ನಾಗೇಶ್, ಅಗ್ನಿಶಾಮಕ ವಾಹನದೊಂದಿಗೆ ಆಗಮಿಸಿದರು. ವಿಧಿವಿಜ್ಞಾನ ಅಪರಾಧ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಶ್ವಾನದಳ ಮತ್ತು ವಿಧ್ವಂಸಕ ತಡೆ ತಪಾಸಣಾ ತಂಡದ ಅಧಿಕಾರಿಗಳು ಆಗಮಿಸಿದರು.
ಮುಂದೇನಾಯ್ತು?:
ಶ್ವಾನದಳ ಸ್ನಿಫಿಂಗ್ ಶ್ವಾನ ವಾರಿಯರ್ ಸಹಾಯದಿಂದ ಬ್ಯಾಗ್‌ಗಳನ್ನು ಪರೀಕ್ಷಿಸಿ, ಸೋಟಕ ವಸ್ತುಗಳಿದ್ದ ಚೀಲ ಗುರುತಿಸಿತು. ಬ್ಯಾಗ್‌ನ್ನು ಎಚ್ಚರಿಕೆಯಿಂದ ತೆರೆದು ನೋಡಿದಾಗ ಪಿಸ್ತೂಲ್ ಮತ್ತು ಮದ್ದುಗುಂಡು ಕಂಡುಬಂದಿತು. ಅಪರಾಧ ದೃಶ್ಯ ತನಿಖಾಧಿಕಾರಿ ದೇವರಾಜ ಮತ್ತು ರಘುನಾಥ್ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಪರಿಶೀಲನೆ ನಡೆಸಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದರು. ಬ್ಯಾಗ್‌ನಲ್ಲಿರುವ ವಸ್ತುಗಳ ಅಗತ್ಯ ಮಾದರಿಗಳನ್ನು ಎಸ್‌ಒಸಿ ಕಿಟ್ ಬಳಸಿ ಎಚ್ಚರಿಕೆಯಿಂದ ಸಂಗ್ರಹಿಸಿ, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಆರ್‌ಪಿಎಫ್ ನಿರೀಕ್ಷಕರಿಗೆ ಹಸ್ತಾಂತರಿಸಿದರು. ಅಲ್ಲಿಗೆ ಅಣಕು ಕಾರ್ಯಾಚರಣೆ ಕೊನೆಗೊಂಡಿತು.
ರಕ್ಷಣಾ ಇಲಾಖೆಗಳ ಸಿಬ್ಬಂದಿ ನೀಡಿದ ಅಣಕು ಕಾರ್ಯಾಚರಣೆ ಸಾರ್ವಜನಿಕರಲ್ಲಿ ಭಯ, ಆತಂಕ ಸೃಷ್ಟಿಸಿ, ಇಲಾಖೆ ಕಾರ್ಯವೈಖರಿ ಬಗ್ಗೆ ಅಭಿಮಾನ, ಪ್ರಶಂಸೆ ಮೂಡಲು ಕಾರಣವಾಯಿತು. ರೈಲ್ವೆ ನಿಲ್ದಾಣದಲ್ಲಿ ಯಾವುದೇ ಅನುಮಾನಸ್ಪದ ವಸ್ತುಗಳು ಕಂಡಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಸಿಬ್ಬಂದಿ ಜನರಿಗೆ ಜಾಗೃತಿ ಮೂಡಿಸಿದರು.