ವಿಜಯೇಂದ್ರ ಬಗ್ಗೆ ಹಾದಿಬೀದಿಯಲ್ಲಿ ಮಾತಾಡೋದು ಸಲ್ಲ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

| Published : Sep 19 2024, 02:00 AM IST / Updated: Sep 19 2024, 11:44 AM IST

MP Renukacharya
ವಿಜಯೇಂದ್ರ ಬಗ್ಗೆ ಹಾದಿಬೀದಿಯಲ್ಲಿ ಮಾತಾಡೋದು ಸಲ್ಲ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ ಅವರ ಬಗ್ಗೆ ಹಾದಿ ಬೀದಿಯಲ್ಲಿ ಟೀಕಿಸುವ ಬದಲು ಪಕ್ಷದ ಆಂತರಿಕ ವೇದಿಕೆಗಳಲ್ಲಿ ಚರ್ಚಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.  

 ಹೊನ್ನಾಳಿ :  ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ ಅವರ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಪಕ್ಷದ ಆಂತರಿಕ ವಿಷಯಗಳನ್ನು ಪಕ್ಷದೊಳಗೇ ಮಾತನಾಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರದ ಗೃಹಮಂತ್ರಿ ಅಮಿತ್‍ ಶಾ ಅವರು ರಾಜ್ಯ ಸಂಘ ಪರಿವಾರದೊಂದಿಗೆ ಚರ್ಚಿಸಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಈಗ ಕೆಲ ಹಿರಿಯ ನಾಯಕರು ವಿಜಯೇಂದ್ರ ಬಗ್ಗೆ ಮಾತನಾಡುವುದು. ಬಿಜೆಪಿ ಹೈಕಮಾಂಡ್ ನೇಮಕ ಮಾಡಿದ್ದನ್ನು ನಮ್ಮ ಕೆಲ ಹಿರಿಯ ನಾಯಕರು ತಿರಸ್ಕಾರ ಮಾಡಿದರೆ, ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ವರಿಷ್ಠರು ಹಾಗೂ ಹಿರಿಯ ನಾಯಕರಿಗೆ ಇವರೇನು ಬೆಲೆ ಕೊಟ್ಟಂತಾಯಿತು ಎಂದು ಪರೋಕ್ಷವಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ಟಾಂಗ್ ಕೊಟ್ಟರು.

ಕೆಲ ನಾಯಕರು ಸಭೆ ಸೇರಿ ವಿಜಯೇಂದ್ರ ವಿರುದ್ಧ ಮಾತನಾಡಿರುವುದನ್ನು ನಾನು ಹಾಗೂ ಅನೇಕ ಬಿಜೆಪಿ ಶಾಸಕರು, ಮಾಜಿ ಶಾಸಕರು ಗಮನಿಸಿದ್ದೇನೆ. ನಾವು ಕೂಡ ಗುಪ್ತ ಸಭೆಗಳನ್ನು ಮಾಡುತ್ತೇವೆ ಎಂದು ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇವೆ. ಆಗ, ಯಾವುದೇ ಕಾರಣಕ್ಕೂ ಅಂಥ ಸಭೆ ಮಾಡಬಾರದು ಎಂದು ಕಟ್ಟುನಿಟ್ಟಿನ ಆದೇಶವನ್ನು ವಿಜಯೇಂದ್ರ ಹಾಗೂ ಯಡಿಯೂರಪ್ಪನವರು ನೀಡಿದ್ದಾರೆ. ಆದ್ದರಿಂದ ನಾವು ಸಭೆಗಳನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ವಿಪಕ್ಷ ನಾಯಕ ರಾಹುಲ್‍ ಗಾಂಧಿ ವಿದೇಶದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ, ರಾಹುಲ್‍ ಗಾಂಧಿ ಒಬ್ಬ ಬಚ್ಚಾ, ಪಪ್ಪು. ಅವರ ಬಗ್ಗೆ ಅವರ ಪಕ್ಷದವರೇ ನಗುತ್ತಾರೆ. ವಿದೇಶದಲ್ಲಿ ನಮ್ಮ ಚುನಾವಣೆ ಬಗ್ಗೆ, ಮೀಸಲಾತಿ ಬಗ್ಗೆ ಮಾತನಾಡಿರುವುದು ಶುದ್ಧ ತಪ್ಪು. ಇದನ್ನು ನಾನು ಖಂಡಿಸುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು.

 ಈಗಾಗಲೇ ರಾಜ್ಯಾಧ್ಯಕ್ಷರ ನೇಮಕವಾಗಿದೆ. ಅವರ ನೇತೃತ್ವದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುತ್ತಿದೆ. ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷ (ವಿಜಯೇಂದ್ರ)ರ ಬದಲಾವಣೆ ಇಲ್ಲ. ಸಂಘ ಪರಿವಾರ ಈಗಾಗಲೇ ಬಿಜೆಪಿ ನಾಯಕರು ಸಭೆ ನಡೆಸಿ, ಪಕ್ಷದ ಆಂತರಿಕ ವಿಷಯಗಳನ್ನು ಚರ್ಚೆ ಮಾಡಬೇಡಿ ಎಂದು ಹೇಳಿದ್ದಾರೆ. ಒಂದುಪಕ್ಷ ಸಭೆ ನಡೆಸಿದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದ್ದಾರೆ

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ