ಸಾರಾಂಶ
ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ದಿನಕ್ಕೆ ₹೩೧೬ಗಳಂತೆ ಕನಿಷ್ಠ ೧೦೦ ದಿನಗಳ ಉದ್ಯೋಗ ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸಲಾಗುತ್ತಿದೆ.
ಮುಂಡಗೋಡ ಕೆಲಸಕ್ಕಾಗಿ ಊರಿಂದ ಊರಿಗೆ ಗುಳೆ ಹೊರಡುವುದನ್ನು ಬಿಟ್ಟು ಇರುವ ಪ್ರದೇಶದಲ್ಲಿಯೇ ನರೇಗಾ ಯೋಜನೆಯಡಿ ಉದ್ಯೋಗ ಮಾಡಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ ಎಂದು ಪಿಡಿಒ ಗಣಪತಿ ಪಿಲ್ಲೋಜಿ ಹೇಳಿದರು.
ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಚವಡಳ್ಳಿ ಗ್ರಾಮದ ಬಸವ ನಗರದಲ್ಲಿ ಅಸಂಘಟಿತ ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡಿರುವ ಚಿಂದಿ ಆಯುವ ಗೋಸಾವಿ ಸಮುದಾಯದವರನ್ನು ಕೇಂದ್ರವಾಗಿರಿಸಿಕೊಂಡು ಹಮ್ಮಿಕೊಂಡಿದ್ದ ರೋಜಗಾರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗೋಸಾವಿ ಸಮುದಾಯ ಸಮಾಜದಲ್ಲಿ ಮುನ್ನೆಲೆಗೆ ಬರಬೇಕಾದರೆ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ದಿನಕ್ಕೆ ₹೩೧೬ಗಳಂತೆ ಕನಿಷ್ಠ ೧೦೦ ದಿನಗಳ ಉದ್ಯೋಗ ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸಲಾಗುತ್ತಿದೆ. ಬರಗಾಲ, ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ೫೦ ದಿನಗಳ ಕೂಲಿ ಕೆಲಸ ಹೆಚ್ಚುವರಿಯಾಗಿ ನೀಡಬಹುದಾಗಿದೆ. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ವಿಶೇಷ ಅವಕಾಶವಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷರಾದ ಬಶಿರಾಬಿ ಮೌಲಾಸಾಬ್ ನದಾಫ್ ಮಾತನಾಡಿ, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯೊಂದಿಗೆ ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ನಿರ್ಮಿಸುವುದು ನರೇಗಾದ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕನ್ನು ಹೊಂದಿದ್ದು, ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲ ವಯಸ್ಕರು ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ. ಮಹಿಳೆಯರಿಗೂ ಸಮಾನ ಕೂಲಿ ಒದಗಿಸಲಾಗುತ್ತದೆ. ಆದ್ದರಿಂದ ಗ್ರಾಪಂಗೆ ಅಗತ್ಯ ದಾಖಲೆ ನೀಡಿ, ಕೂಡಲೇ ಜಾಬ್ ಕಾರ್ಡ್ ಪಡೆಯುವಂತೆ ಸಲಹೆ ನೀಡಿದರು.
ನರೇಗಾ ಯೋಜನೆಯಿಂದ ಪಡೆದುಕೊಳ್ಳಬಹುದಾದ ಲಾಭ ಮತ್ತು ಸವಲತ್ತುಗಳ ಬಗ್ಗೆ ನಮಗೆ ಅರಿವಿರಲಿಲ್ಲ. ಅಧಿಕಾರಿಗಳು ನಮ್ಮ ಮನೆಬಾಗಿಲಿಗೆ ಬಂದು ಯೋಜನೆ ಬಗ್ಗೆ ಮನವರಿಕೆ ಮಾಡಿಸಿದ್ದಾರೆ. ಇದರಿಂದ ಪ್ರೇರಿತರಾದ ನಾವು ಆದಷ್ಟು ಬೇಗ ಜಾಬ್ ಕಾರ್ಡ್ ಮಾಡಿಸಿಕೊಂಡು, ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಗೋಸಾವಿ ಸಮುದಾಯದ ಮುಖಂಡ ಪರಶುರಾಮ ಗೋಸಾವಿ ಹೇಳಿದರು.ಗ್ರಾಪಂ ಸದಸ್ಯೆ ಸೋಮಕ್ಕಾ ಕಾಳಿ, ಗ್ರಾಪಂ ಸಿಬ್ಬಂದಿ, ಸಮುದಾಯ ಮುಖಂಡರು ಉಪಸ್ಥಿತರಿದ್ದರು.