ಸಾರಾಂಶ
ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದ ಹೇಮಗಿರಿಮಠದಲ್ಲಿನ ವಿವಿಧ ಬೆಳ್ಳಿ ಹಾಗೂ ಬಂಗಾರದ ವಸ್ತುಗಳು ಶುಕ್ರವಾರ ಬೆಳಗಿನ ಜಾವ ಕಳ್ಳತನವಾಗಿದೆ. ಸುಮಾರು ₹9.28 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚ ತಜ್ಞರು, ಶ್ವಾನ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.
ಗುತ್ತಲ: ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಹೇಮಗಿರಿಮಠದಲ್ಲಿನ ಬೆಳ್ಳಿಯ ವಿಗ್ರಹಗಳು ಸೇರಿದಂತೆ ಮಠದಲ್ಲಿನ ವಿವಿಧ ಬೆಳ್ಳಿ ಹಾಗೂ ಬಂಗಾರದ ವಸ್ತುಗಳು ಕಳ್ಳತನವಾಗಿರುವ ಘಟನೆ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.
ಹೇಮಗಿರಿಮಠದಲ್ಲಿದ್ದ ವಿವಿಧ ಬೆಳ್ಳಿಯ ವಿಗ್ರಹಗಳು ಸೇರಿದಂತೆ ಸುಮಾರು ₹9.28 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚ ತಜ್ಞರು, ಶ್ವಾನ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.ಶಿಲೆಯಿಂದ ನಿರ್ಮಾಣ ಹಂತದಲ್ಲಿರುವ ಮಠದ ಹಿಂಭಾಗದಲ್ಲಿದ್ದ ಸುಮಾರು 12 ಕೆಜಿ ತೂಕದ ಸುಮಾರು ₹7.58 ಲಕ್ಷ ಬೆಲೆಯ ವಿಗ್ರಹಗಳು ಹಾಗೂ ವಿವಿಧ ಬೆಳ್ಳಿ ವಸ್ತುಗಳು ಹಾಗೂ ₹1.70 ಲಕ್ಷ ಬೆಲೆಯ ಸುಮಾರು 35 ಗ್ರಾಂ ತೂಕದ ಬಂಗಾರದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.ಘಟನೆ ವಿಷಯ ತಿಳಿಯುತ್ತಿದ್ದಂತೆ ಭಕ್ತರು ತಂಡೋಪತಂಡವಾಗಿ ಮಠಕ್ಕೆ ಆಗಮಿಸಿದರು, ಕೆಲವರು ಭಾವುಕರಾದರು, ಇನ್ನೂ ಕೆಲವರು ಕಣ್ಣೀರಿಟ್ಟರು. 10ನೇ ಶತಮಾನದ ಆದಿಭಾಗದ ಇತಿಹಾಸವುಳ್ಳ ಮಠದಲ್ಲಿ ಮೊದಲ ಬಾರಿಗೆ ಕಳ್ಳತನ ಪ್ರಕರಣವನ್ನು ಕಂಡ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಸಿ. ಗೋಪಾಲ, ಡಿವೈಎಸ್ಪಿ ಎಂ.ಎಸ್. ಪಾಟೀಲ್, ಸಿಪಿಐ ಸಂತೋಷ ಪವಾರ ಹಾಗೂ ಪಿಎಸ್‌ಐಗಳಾದ ಶಂಕರಗೌಡ ಪಾಟೀಲ, ಎ.ಆರ್. ಮುಂದಿನಮನಿ ಆಗಮಿಸಿ ಪರಿಶೀಲಿಸಿದರು. ಘಟನೆ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿ ಕ್ಯಾಮೆರಾ ಅಳವಡಿಸಿ: ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಬೈಕ್, ಸೈಕಲ್ ಹಾಗೂ ನೀರು ತರುವ ಗಾಡಿಗಳು ಸಹ ಕಳ್ಳತನವಾಗುತ್ತಿದ್ದು, ಪಪಂ ಅಧಿಕಾರಿಗಳು ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.