ಇಳೆಗೆ ತಂಪೆರೆದ ಮಳೆರಾಯ

| Published : Apr 21 2024, 02:18 AM IST

ಸಾರಾಂಶ

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮದಲ್ಲಿ ಮಳೆರಾಯ ತಂಪು ತಂದಿದ್ದಾನೆ.

ಗುಡುಗು, ಸಿಡಿಲು, ಮಿಂಚುಗಳ ಆರ್ಭಟದೊಂದಿಗೆ ಸುರಿದ ಮಳೆ । ಮೊದಲ ಮಳೆಗೆ ರೈತರ ಹರ್ಷ

ಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮದಲ್ಲಿ ಮಳೆರಾಯ ತಂಪು ತಂದಿದ್ದಾನೆ.

ಶನಿವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮಳೆ ಬೆಳಗ್ಗೆ 11 ಗಂಟೆಯವರೆಗೂ ಸುರಿದಿದೆ. ಇದರಿಂದ ಇಳೆ ತಂಪಾಗಿದೆ. ಗುಡುಗು, ಸಿಡಿಲು, ಮಿಂಚುಗಳ ಆರ್ಭಟದೊಂದಿಗೆ ಮಳೆ ಸುರಿದಿದ್ದು, ಮುಂಜಾವಿನಲ್ಲಿ ಗುಡುಗು, ಸಿಡಿಲುಗಳ ಅಬ್ಬರಕ್ಕೆ ಜನರು ಬೆಚ್ಚಿಬಿದ್ದರು.

ತಂಪು: ಬೇಸಿಗೆ ಬಿಸಿಲಿನಿಲಿಂದ ಬಸವಳಿದಿದ್ದ ಇಳೆಗೆ ಮಳೆ ತಂಪು ನೀಡಿತು. ಬಿಸಿಲ ಝಳಕ್ಕೆ ಜನರು ಹೈರಾಣವಾಗಿದ್ದರು. ಉತ್ತಮ ಮಳೆ ಸುರಿದಿದ್ದರಿಂದ ತಂಪಾದ ವಾತಾವರಣ ಜನರ ಮನಸ್ಸಿನಲ್ಲಿ ಮುದ ತಂದಿತು.

ಕೃಷಿ ಚಟುವಟಿಕೆಗೆ ಅನುಕೂಲ:ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಕೃಷಿ ಚಟುವಟಿಕೆ ಆರಂಭಕ್ಕೆ ರೈತರಿಗೆ ಅನುಕೂಲ ಆಯಿತು. ಉತ್ತಮ ಮಳೆಯಿಂದ ಭೂಮಿ ಹದ ಮಾಡಿಕೊಳ್ಳಲು ರೈತರು ಮುಂದಾಗುತ್ತಿದ್ದಾರೆ. ಭೂಮಿಯನ್ನು ನೇಗಿಲು ಹೊಡೆಯುವುದು, ಹರಗುವುದು ಹೀಗೆ ಬೆಳೆ ಬಿತ್ತಲು ಸಿದ್ಧಪಡಿಸುವುದು ಆರಂಭವಾಗಲಿದೆ.

ಹರಿದ ಹಳ್ಳ: ಯರೇಭಾಗದ ಗ್ರಾಮಗಳಲ್ಲಿ ಮಳೆ ಸುರಿದ್ದರಿಂದ ಹಳ್ಳಗಳಲ್ಲಿ ನೀರು ಹರಿಯಿತು. ಬೇಸಿಗೆ ದಿನಗಳಲ್ಲಿ ನೀರಿಲ್ಲದೆ ಬಣಗುಡುತ್ತಿದ್ದ ಹಳ್ಳ ನೀರಿನ ಹರಿವು ಕಂಡಿತು. ಇದರಿಂದ ಕುರಿಗಾಹಿಗಳಿಗೆ ನೀರಿನ ತಾಪತ್ರಯ ತಪ್ಪಿತು. ತಾಲೂಕಿನ ಯರೇಭಾಗದಲ್ಲಿ ಉತ್ತಮ ಮಳೆ ಕಾರಣ ತಾಲೂಕಿನ ನಿಂಗಾಪೂರ ಹಳ್ಳ ತುಂಬಿ ಹರಿಯಿತು.

ಯಲಬುರ್ಗಾದಲ್ಲಿ ತಂಪೆರೆದ ಮಳೆ:

ಯಲಬುರ್ಗಾ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿಯಿತು.ಬಿಸಿಲಿನಿಂದ ತತ್ತರಿಸಿದ್ದ ಜನತೆಯ ಜೀವಕ್ಕೆ ಮಳೆ ತಂಪೆರೆದಂತಾಯಿತು. ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಯಿಂದ ರಸ್ತೆಯೆಲ್ಲೆಲ್ಲ ನೀರು ಹರಿದಾಡಿತು. ಇದರಿಂದ ಅಲ್ಲಲ್ಲಿ ಜನತೆ ಸಾಕಷ್ಟು ಪರದಾಡುವಂತಾಯಿತು. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಗಳಾಗಿಲ್ಲ.೨೦ವೈಎಲ್‌ಬಿ೩: ಯಲಬುರ್ಗಾದಲ್ಲಿ ಶನಿವಾರ ಬೆಳಗ್ಗೆ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿಯಿತು.