ಪ್ರಣಾಳಿಕೆ ಮಾಧ್ಯಮಗಳ ಮೂಲಕವೇ ತಿಳಿಸುವ ವ್ಯವಸ್ಥೆ ಬೇಕು: ಕೇದಾರಲಿಂಗ ಶ್ರೀ

| Published : Apr 13 2024, 01:08 AM IST

ಪ್ರಣಾಳಿಕೆ ಮಾಧ್ಯಮಗಳ ಮೂಲಕವೇ ತಿಳಿಸುವ ವ್ಯವಸ್ಥೆ ಬೇಕು: ಕೇದಾರಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತಗಳನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಬೇಕು ಎಂದು ಸ್ಥಳೀಯ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಚನ್ನಗಿರಿಯಲ್ಲಿ ನುಡಿದಿದ್ದಾರೆ.

- ಯುಗಾದಿ ಅಂಗವಾಗಿ ಪಂಚಾಂಗ ಶ್ರವಣ ಕಾರ್ಯಕ್ರಮ

- - -

ಚನ್ನಗಿರಿ: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತಗಳನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಬೇಕು ಎಂದು ಸ್ಥಳೀಯ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಹಿರೇಮಠದಲ್ಲಿ ಬುಧವಾರ ಸಂಜೆ ಯುಗಾದಿ ಹಬ್ಬದ ಚಂದ್ರದರ್ಶನ ನಂತರ ನೂತನ ವರ್ಷದ ಪಂಚಾಂಗ ಶ್ರವಣ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮತದಾನ ಮಾಡುವುದರಿಂದ ಉತ್ತಮವಾದ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನಿಮ್ಮದಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ರಾಜಕೀಯ ಪಕ್ಷಗಳ ಆಭ್ಯರ್ಥಿಗಳಾಗಲಿ, ಪಕ್ಷೇತರರಾಗಲಿ ನಾಮಪತ್ರಗಳನ್ನು ಸಲ್ಲಿಸಿ, ಮತ ಕೇಳಲು ಮತದಾರನ ಮನೆ ಮನೆಗಳಿಗೆ ಅಲೆಯಬಾರದು. ಬದಲಿಗೆ ತಮ್ಮಗಳ ಅಭಿವೃದ್ಧಿ ಪ್ರಣಾಳಿಕೆ ವಿಚಾರಗಳನ್ನು ಜವಾಬ್ದಾರಿಯುತ ದೃಶ್ಯ ಮಾಧ್ಯಮಗಳ ಮೂಲಕ, ಮುದ್ರಣ ಮಾಧ್ಯಮಗಳ ಮೂಲಕ ತಿಳಿಸುವ ವ್ಯವಸ್ಥೆ ಜಾರಿಯಾಗಬೇಕು. ಮತ ಚಲಾಯಿಸದವರಿಗೆ ಸರ್ಕಾರಿ ಸೌಲಭ್ಯ ನೀಡದಂತೆ ಮಾಡಬೇಕು ಎಂದು ತಿಳಿಸಿದರು.

ಹಿಂದೂ ಧರ್ಮದಲ್ಲಿ ಕಡಿಮೆ ಜನ ಸಂಖ್ಯೆ ಇರುವಂತಹ ಜನಾಂಗದವರಿಗೂ ಚುನಾವಣೆಗೆ ಸ್ಫರ್ಧೆಗೆ ಮೀಸಲಾತಿ ನೀಡಬೇಕು. ಇಂತಹ ಇನ್ನು ಹಲವು ನೀತಿ ನಿಯಮಾವಳಿಗಳನ್ನು ಚುನಾವಣಾ ಆಯೋಗ ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು.

ಹೊದಿಗೆರೆ ಗ್ರಾಮದ ಶ್ರೀ ಬೂದಿಸ್ವಾಮಿ ಹಿರೇಮಠ್ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಿಕೊಟ್ಟರು. 2024ರ ನೂತನ ವರ್ಷದಲ್ಲಿ ಪಂಚಾಂಗದಲ್ಲಿ ಇದ್ದಂತೆ ವರ್ಷದ ಮಳೆ-ಬೆಳೆ, ಲಾಭ-ನಷ್ಟ, 12 ರಾಶಿಗಳ ಗೋಚರ ಫಲಗಳ ಬಗ್ಗೆ ವಾಚನ ಮಾಡಿದರು.

ವೀರಶೈವ ಸಮಾಜ ಗೌರವ ಅಧ್ಯಕ್ಷ ರಾಜಶೇಖರಯ್ಯ, ಮಾಜಿ ಅಧ್ಯಕ್ಷ ಸಾಗರದ ಶಿವಲಿಂಗಪ್ಪ, ನಾಗೇಂದ್ರಯ್ಯ, ಸಂಗಯ್ಯ, ಕರಿಸಿದ್ದಪ್ಪ ಮಾಸ್ತರ್, ಓಂಕಾರಪ್ಪ, ಎಲ್.ಎಂ.ರೇಣುಕಾ, ನೀಲಕಂಠಶಾಸ್ತ್ರಿ, ಮಲ್ಲಿಕಾರ್ಜುನಪ್ಪ, ಭಕ್ತರು ಭಾಗವಹಿಸಿದ್ದರು.

- - - -11ಕೆಸಿಎನ್‌ಜಿ1:

ಚನ್ನಗಿರಿ ಪಟ್ಟಣದ ಹಿರೇಮಠದಲ್ಲಿ ಬೂದಿಸ್ವಾಮಿ ಹಿರೇಮಠ್‌ ಅವರು ಹೊಸ ವರ್ಷದ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಿಕೊಟ್ಟರು.