ಸಿಹಿ, ಕಹಿ ಎರಡನ್ನೂ ನೀಡಿದ ವರ್ಷ

| Published : Dec 31 2024, 01:04 AM IST

ಸಾರಾಂಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅನೇಕ ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾದ 2024ನೇ ವರ್ಷ ತೆರೆ ಮರೆಗೆ ಸರಿದು 2025ರ ಹೊಸ ಬೆಳಕು ಮೂಡುವ ಸಮಯ ಬಂದಿದೆ. ಹೊಸ ವರ್ಷದ ಆರಂಭದಲ್ಲೇ ರಾಷ್ಟ್ರಪತಿ ದ್ರೌಪತಿ ಮುರ್ಮು ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. 2024ರಲ್ಲಿ ಜಿಲ್ಲೆಯಲ್ಲಿ ಗತಿಸಿದ ವಿದ್ಯಮಾನಗಳು ಪುನರ್‌ಮನನದ ಘಟನೆಗಳಾಗಿ ಚರಿತ್ರೆಯ ಪುಟ ಸೇರಿವೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅನೇಕ ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾದ 2024ನೇ ವರ್ಷ ತೆರೆ ಮರೆಗೆ ಸರಿದು 2025ರ ಹೊಸ ಬೆಳಕು ಮೂಡುವ ಸಮಯ ಬಂದಿದೆ. ಹೊಸ ವರ್ಷದ ಆರಂಭದಲ್ಲೇ ರಾಷ್ಟ್ರಪತಿ ದ್ರೌಪತಿ ಮುರ್ಮು ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. 2024ರಲ್ಲಿ ಜಿಲ್ಲೆಯಲ್ಲಿ ಗತಿಸಿದ ವಿದ್ಯಮಾನಗಳು ಪುನರ್‌ಮನನದ ಘಟನೆಗಳಾಗಿ ಚರಿತ್ರೆಯ ಪುಟ ಸೇರಿವೆ.

ಲೋಕಸಭಾ ಚುನಾವಣೆ ವರ್ಷ, ಕಿತ್ತೂರು ಚನ್ನಮ್ಮ ವಿಜಯೋತ್ಸವಕ್ಕೆ 200 ವರ್ಷದ ಸಂಭ್ರಮಾಚರಣೆ, ಐತಿಹಾಸಿಕ ಕಾಂಗ್ರೆಸ್‌ ಅಧಿವೇಶನಕ್ಕೆ ನೂರನೇ ವರ್ಷದ ಶತಮಾನೋತ್ಸವ ಆಚರಣೆ, ವಿಧಾನಮಂಡಲ ಅಧಿವೇಶನ ಹೀಗೆ ಹಲವು ರಾಜಕೀಯ ಬೆಳವಣಿಗೆಗೂ ಗಡಿ ಜಿಲ್ಲೆ ಸಾಕ್ಷಿಯಾಯಿತು.

ವರ್ಷದ ಆರಂಭದಲ್ಲೇ ಜಿಲ್ಲೆಯ ₹1622 ಕೋಟಿ ವೆಚ್ಚದ ಹೊನಗಾ-ಝಾಡಶಹಾಪುರ ಚತುಷ್ಪಥ ರಿಂಗ್ ರಸ್ತೆ, ₹ 941 ಕೋಟಿ ವೆಚ್ಚದ ಚಿಕ್ಕೋಡಿ ಬೈಪಾಸ್‌ನಿಂದ-ಗೋಟೂರವರೆಗಿನ ಚತುಷ್ಪಥ ಹಾಗೂ ಶಿರಗುಪ್ಪಿಯಿಂದ ಅಂಕಲಿವರೆಗಿನ ₹887 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಸೇರಿದಂತೆ ಒಟ್ಟಾರೆ ₹13 ಸಾವಿರ ಕೋಟಿ ಮೌಲ್ಯದ 680 ಕಿಮೀ ಉದ್ದದ 36 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿ ಅ‍ವರು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೋರಾಟದ ಬದುಕನ್ನು ಕಲೆಗಳಲ್ಲಿ ಹಿಡಿದುವ ಪ್ರಯತ್ನವಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ನಿರ್ಮಿಸಲಾಗಿದೆ. ಸಂಗೊಳ್ಳಿ ರಾಯಣ್ಣನ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಸವಿನೆನಪಿಗಾಗಿ ಸರ್ಕಾರ ನೂರಾರು ಕೋಟಿ ರು.ವೆಚ್ಚ ಮಾಡಿ ಸಂಗೊಳ್ಳಿಯಲ್ಲಿ ಅಂತಾರಾಷ್ಟ್ರೀಯ ಸೈನಿಕ ಶಾಲೆಯನ್ನು ಸಂಗೊಳ್ಳಿ ರಾಯಣ್ಣ ಉತ್ಸವದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ಗಮನ ಸೆಳೆದಿತ್ತು. ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರೆಸಿದ್ದರೆ, ಬಿಜೆಪಿ ಹಿಡಿತದಲ್ಲಿದ್ದ ಚಿಕ್ಕೋಡಿ ಕ್ಷೇತ್ರವನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗುವುದರೊಂದಿಗೆ ಗಮನ ಸೆಳೆಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್‌ ಅವರನ್ನೂ ಸೋಲಿಸಿ, ಶೆಟ್ಟರ್‌ ಅವರು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಭರ್ಜರಿಗೆಲುವು ಸಾಧಿಸಿದರು. ಸಚಿವೆ ಹೆಬ್ಬಾಳಕರ ಅ‍ವರು ಜಗದೀಶ ಶೆಟ್ಟರ್‌ ವಿರುದ್ಧ ಪದೇ ಪದೆ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದರು. ಆದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶೆಟ್ಟರ್‌ ಚುನಾವಣಾ ಕಾರ್ಯತಂತ್ರ ರೂಪಿಸಿ, ಭರ್ಜರಿ ಗೆಲುವು ಸಾಧಿಸಿ, ಫಲಿತಾಂಶದ ಮೂಲಕವೇ ಲಕ್ಷ್ಮೀ ಹೆಬ್ಬಾಳಕರ ಅ‍ವರಿಗೆ ಪ್ರತ್ಯುತ್ತರ ನೀಡಿದರು.

ಚಿಕ್ಕ ವಯಸ್ಸಿನಲ್ಲಿ ಲೋಕಸಭೆ ಪ್ರವೇಶ: ಇನ್ನು ಈ ವರ್ಷ ರಾಜಕಾರಣ ಕ್ಷೇತ್ರದಲ್ಲಿ ಗಮನಿಸಬಹುದಾದ ಬೆಳವಣಿಗೆ ಆಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 1996ರಲ್ಲಿ ಮಾಜಿ ಕೇಂದ್ರ ಸಚಿವರಾಗಿದ್ದ ದಿ.ಬಿ. ಶಂಕರಾನಂದ ಅವರನ್ನು ಜನತಾದಳದ ರತ್ನಮಾಲಾ ಸವಣೂರು ಅವರು ಸೋಲಿಸಿ, ಮೊದಲ ಬಾರಿಗೆ ಗೆದ್ದಿದ್ದರು. ಆ ನಂತರ ಮಹಿಳಾ ರಾಜಕಾರಣಿ ಇಲ್ಲಿ ಬೆಳೆದಿರಲಿಲ್ಲ. ಈ ವರ್ಷ ರಾಜಕಾರಣದಲ್ಲಿ ಕೆಲ ಬದಲಾವಣೆಗಳಾಯಿತು. ಬಿಜೆಪಿಯ ಹಿಡಿತದಲ್ಲಿದ್ದ ಈ ಕ್ಷೇತ್ರವನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ವಿರುದ್ಧ ಗೆಲುವು ಸಾಧಿಸಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕ ವಯಸ್ಸಿನಲ್ಲೇ ಸಂಸತ್‌ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಬೆಳೆ, ಜಲ ಸಮೃದ್ಧಿ:

ಈ ಬಾರಿ ವರ್ಷವಿಡೀ ಮಳೆಗಾಲ ವಾತಾವರಣ ಇತ್ತು. ಹಾಗಾಗಿ, ಜಿಲ್ಲೆಯ ಪ್ರಮುಖವಾಗಿರುವ ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಉತ್ತಮ ಮಳೆ ಆಗಿದ್ದರಿಂದ ಬೆಳೆಗಳು ಸಮೃದ್ದವಾಗಿವೆ. ಜೊತೆಗೆ ಜಲ ಸಮೃದ್ಧಿಯಾಗಿದೆ.

ಜಮೀನು ವಾಪಸ್‌ ನೀಡಿದ ಪಾಲಿಕೆ:

ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಖಾಸಗಿ ಮಾಲಿಕತ್ವದ ಜಮೀನನಲ್ಲಿ ಅಕ್ರಮವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಪ್ರಕರಣದಿಂದ ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಅನಧಿಕೃತವಾಗಿಯೇ ಜಮೀನು ಸ್ವಾಧೀನಪಡಿಸಿಕೊಂಡು, ಕೋಟ್ಯಂತರ ರುಪಾಯಿ ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಪಾಲಿಕೆಯ ಕ್ರಮ ಪ್ರಶ್ನಿಸಿ, ಜಮೀನಿನ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣ ಮಹಾನಗರ ಪಾಲಿಕೆ ಆಯುಕ್ತರನ್ನು ಮುಜುಗರಕ್ಕೀಡು ಮಾಡುವಂತೆ ಮಾಡಿತ್ತು. ನ್ಯಾಯಾಲಯ ಜಮೀನು ಮಾಲೀಕರಿಗೆ ಪರಿಹಾರ ನೀಡಬೇಕು. ಇಲ್ಲವೇ ಜಮೀನು ವಾಪಸ್‌ ನೀಡುವಂತೆ ಆದೇಶ ನೀಡಿತ್ತು. ಇದರಿಂದಾಗಿ ಪಾಲಿಕೆಯು ಮಾಲೀಕರಿಗೆ ಜಮೀನು ಮರಳಿ ನೀಡಿತು. ಬಳಿಕ ಈ ರಸ್ತೆಯನ್ನು ಸಂಚಾರಕ್ಕೆ ಸ್ಥಗಿತಗೊಳಿಸಲಾಯಿತು.ಎಂಇಎಸ್‌ ಮಹಾಮೇಳಾವಕ್ಕೆ ಬ್ರೇಕ್‌:

ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ವಿರುದ್ಧವಾಗಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟಿಸಲು ಉದ್ದೇಶಿಸಿದ್ದ ಮಹಾಮೇಳಾವಕ್ಕೆ ಈ ಬಾರಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿತು. ಆದಾಗ್ಯೂ ನಾಡದ್ರೋಹಿ ಎಂಇಎಸ್‌ ಮುಖಂಡರು ಸಂಭಾಜಿ ವೃತ್ತದಲ್ಲಿ ಮಹಾಮೇಳಾವ್‌ ಮಾಡಲು ಮುಂದ ವೇಳೆ ಪೊಲೀಸರು ಅವರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ:

ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಬೆಳಗಾವಿ ಮತ್ತೊಮ್ಮೆ ಸಾಕ್ಷಿಯಾಯಿತು. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಟಿಳಕವಾಡಿಯ ವೀರಸೌಧದ ಆವರಣದಲ್ಲಿ ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಅಧಿವೇಶನಕ್ಕೆ ಮುನ್ನುಡಿ ಬರೆದಂತಾಗಿದೆ.

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಜೈ ಬಾಪೂ, ಜೈ ಭೀಮ, ಜೈ ಸಂವಿಧಾನ ಸಭೆಯನ್ನೂ ರದ್ದುಗೊಳಿಸಲಾಯಿತು. ಅದೇ ವೇದಿಕೆಯ ಮೇಲೆಯೇ ಕೆಪಿಸಿಸಿ ವತಿಯಿಂದ ಮನಮೋಹನ ಸಿಂಗ್‌ ಅವರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಇಡೀ ಬೆಳಗಾವಿ ನಗರದ ಪ್ರಮುಖ ಮಾರ್ಗಗಳು ಮತ್ತು ವೃತ್ತಗಳನ್ನು ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು. ಇದರಿಂದಾಗಿ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಈ ಎಲ್ಲ ಘಟನೆಗಳು ಇತಿಹಾಸ ಪುಟ ಸೇರಿದ್ದಾಗಿದೆ.-----------

ಪಂಚಮಸಾಲಿಗರ ಮೇಲೆ ಲಾಠಿ ಜಾರ್ಜ್: ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಎದುರು 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಜಾರ್ಜ್ ಮಾಡಿದರು. ಸಮಾಜದ ಮುಖಂಡರು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೊಲೀಸರು ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ರಾಷ್ಟ್ರಮಟ್ಟದ ಸುದ್ದಿಯಾದ ಹೆಬ್ಬಾಳಕರ, ಸಿಟಿ ರವಿ ಕೇಸ್‌: ವರ್ಷದ ಕೊನೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿಲ್ಲ. ಬದಲಾಗಿ ವಿಧಾನ ಪರಿಷತ್‌ ಕಲಾಪದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಕ್ಷೇಪನಾರ್ಹ ಪದ ಬಳಕೆ ಮಾಡಿರುವುದು ಕಲಾಪವನ್ನೇ ಬಲಿ ತೆಗೆದುಕೊಂಡಿತು. ಈ ವಿಚಾರವಾಗಿ ಕಾಂಗ್ರೆಸ್‌, ಬಿಜೆಪಿ ನಾಯಕರು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದರು. ಸುವರ್ಣ ವಿಧಾನಸೌಧದ ಆವರಣದಲ್ಲೇ ಸಿ.ಟಿ. ರವಿ ಕಾರಿಗೆ ಮುತ್ತಿಗೆ ಹಾಕಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಸುವರ್ಣ ವಿಧಾನಸೌಧಕ್ಕೆ ನುಗ್ಗಿ, ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಹಿರೇಬಾಗೇವಾಡಿ ಪೊಲೀಸರು ಸಿ.ಟಿ. ರವಿ ಅವರನ್ನು ಹೊತ್ತುಕೊಂಡು ಹೋಗಿ ಬಂಧಿಸಿದರು. ಬಳಿಕ ಅವರನ್ನು ರಾತ್ರಿಯಿಡೀ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿನ ಠಾಣೆಯಿಂದ ಠಾಣೆಗೆ ಅಲೆದಾಡಿಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಯ್ತು. ಈ ಪ್ರಕರಣ ಸಂಬಂಧ ಖಾನಾಪುರ ಠಾಣೆ ಸಿಪಿಐ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು.