ವೃದ್ಧರನ್ನು ಆಶ್ರಯ ಮನೆಯಿಂದ ಹೊರಹಾಕಿದ ಅಧಿಕಾರಿಗಳು

| Published : Dec 31 2024, 01:04 AM IST

ಸಾರಾಂಶ

ಫಲಾನುಭವಿಗಳಿಗೆ ನೀಡಿದ್ದ ಜಿ 1 ಮನೆಯಿಂದ ಪುರಸಭೆ ಅಧಿಕಾರಿಗಳು ರಾತ್ರೋರಾತ್ರಿ ಹೊರಹಾಕಿದ ಅಮಾನವೀಯ ಘಟನೆ ಶಿಗ್ಗಾಂವಿಯಲ್ಲಿ ನಡೆದಿದೆ.

ಶಿಗ್ಗಾಂವಿ: ಫಲಾನುಭವಿಗಳಿಗೆ ನೀಡಿದ್ದ ಜಿ+1 ಮನೆಯಿಂದ ಪುರಸಭೆ ಅಧಿಕಾರಿಗಳು ರಾತ್ರೋರಾತ್ರಿ ಹೊರಹಾಕಿದ ಅಮಾನವೀಯ ಘಟನೆ ಶಿಗ್ಗಾಂವಿಯಲ್ಲಿ ನಡೆದಿದೆ.

ಪಟ್ಟಣದಲ್ಲಿ ಜಿ ಪ್ಲಸ್‌-1 ಯೋಜನೆಯಡಿ ಮನೆ ನಂಬರ್‌ 4ರಲ್ಲಿ ತಂಗಿದ್ದ ವೃದ್ಧ ಫಲಾನುಭವಿ ಶಾಂತವ್ವ, ನೀಲವ್ವ, ರೇಣವ್ವ ಎಂಬವರನ್ನು ಪುರಸಭೆ ಅಧಿಕಾರಿಗಳು ಸಾಮಾನು ಸರಂಜಾಮುಗಳೊಂದಿಗೆ ಖಾಲಿ ಮಾಡಿಸಿದ್ದಾರೆ.

ಪರಿಣಾಮ ಶಾಂತವ್ವ ರಾತ್ರಿಯಿಡಿ ಚಳಿಯಲ್ಲೇ ನಡುಗುತ್ತಾ ಕುಳಿತಿದ್ದಾರೆ. ೭೫ ವರ್ಷದ ವಯೋವೃದ್ಧೆ ನೀಲವ್ವ, ರೇಣವ್ವ ಎಂಬುವರನ್ನು ಹೊರ ಹಾಕಿಸಿದ್ದಾರೆ. ಶಾಂತವ್ವ ಅವರ ಪುತ್ರಿ, ಹಾವೇರಿಯಲ್ಲಿ ಪಿಯುಸಿ ಓದುತ್ತಿರುವ ಪ್ರಿಯಾಂಕಾ ಹೊರಗಡೆ ಕಳೆದಿದ್ದಾರೆ.

ಶಿಗ್ಗಾಂವಿ ಪಟ್ಟಣದ ಜಿ ಪ್ಲಸ್ ೧ ಯೋಜನೆಯಡಿ ನಂಬರ್ ೪ ಮನೆ ಮಂಜೂರು ಮಾಡಿದ್ದ ಶಿಗ್ಗಾಂವಿ ಪುರಸಭೆ ಕಾರ್ಯಾಲಯ, ಬಳಿಕ ಸಿಖ್ ಸಮುದಾಯದ ಕೆಲವರಿಗೆ ಮನೆ ಕೊಡಬೇಕು ಎನ್ನುವ ಉದ್ದೇಶದಿಂದ ನಿಮಗೆ ವ್ಯವಸ್ಥಿತವಾದ ಇನ್ನೊಂದು ಜಿ ಪ್ಲಸ್ ೧ ಮನೆ ಕೊಡಿಸುವುದಾಗಿ ಭರವಸೆ ನೀಡಿ, ಮನೆ ಮಂಜೂರಾತಿ ಪತ್ರ ವಾಪಸ್ ಪಡೆದಿದ್ದಾರೆ.

ಶಿಗ್ಗಾಂವಿ ಪಟ್ಟಣದಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದ ಕುಟುಂಬ ಪ್ರತಿ ತಿಂಗಳು ₹೩ ಸಾವಿರ ಬಾಡಿಗೆ ಕಟ್ಟಲಾಗದೇ ತಮಗೆ ನೀಡಿದ ಮನೆ ಬೀಗ ಮುರಿದು ಮನೆಯಲ್ಲಿ ವಾಸವಿದ್ದರು.

ಏಕಾಏಕಿ ಪೊಲೀಸ್ ಸಿಬ್ಬಂದಿಯೊಡನೆ ಬಂದು ಮನೆ ಖಾಲಿ ಮಾಡಿಸಿದ ಪುರಸಭೆ ಮುಖ್ಯ ಅಧಿಕಾರಿ ಮಲ್ಲೇಶ ಏಕ ವಚನದಲ್ಲಿ ಶಾಂತವ್ವ ಅವರಿಗೆ ಬೈದಿದ್ದಾರೆ. ಮನೆಯ ಪೀಠೋಪಕರಣಗಳನ್ನು ಹೊರ ಹಾಕಿಸಿ, ಮನೆ ಮಂಜೂರೇ ಆಗಿಲ್ಲ, ಸಂಸಾರ ಮಾಡೋಕೆ ಬಂದಿದಾಳೆ, ಮಲಗೋಕೆ ಬಂದಿದ್ದಾಳೆ ಎಂದು ನಿಂದಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಶಿಗ್ಗಾಂವಿ ಪಟ್ಟಣದಲ್ಲಿ ಫಲಾನುಭವಿಗಳಿಗೆ ನೀಡಿದ ಜಿ+ ವಸತಿ ಮನೆಗಳನ್ನು ಅಧಿಕಾರಿಗಳು ಪೊಲೀಸರ ನೆರವಿನಿಂದ ಫಲಾನುಭವಿಗಳಿಂದ ಕಸಿದುಕೊಂಡಿದ್ದಾರೆ. ಅವರ ವಸ್ತುಗಳನ್ನು ಬೀದಿಗೆ ಬಿಸಾಕಿರುವುದರಿಂದ ನೊಂದ ಕುಟುಂಬದವರು, ಕೊರೆಯುವ ಚಳಿಯಲ್ಲಿ ರಾತ್ರಿಯಿಡೀ ಮನೆಯ ಮುಂದೆ ವಾಸ್ತವ್ಯ ಹೂಡಿ ಬದುಕಿಗಾಗಿ ಹೋರಾಟ ಮುಂದುವರಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ವಸತಿ ವ್ಯವಸ್ಥೆಯನ್ನು ಕೂಡಲೆ ಒದಗಿಸಬೇಕು, ಇಲ್ಲವಾದಲ್ಲಿ ಹೋರಾಟ ತೀವ್ರಗೊಳ್ಳುತ್ತದೆ ಎಂದು ಮುಖಂಡ ಬಸವರಾಜ ಪೂಜಾರ ಹೇಳಿದರು.