ಏಡ್ಸ್ ಹರಡುವಿಕೆ ಪ್ರಮಾಣ ಕಡಿಮೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಪ್ರಸರಣ ಹೆಚ್ಚುತ್ತಿದ್ದು,ಯುವ ಜನಾಂಗ ಇದಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ನೀಲೇಶ ಎಂ.ಎನ್. ಕಳವಳ ವ್ಯಕ್ತಪಡಿಸಿದರು.
ಸವಣೂರು:ಏಡ್ಸ್ ಹರಡುವಿಕೆ ಪ್ರಮಾಣ ಕಡಿಮೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಪ್ರಸರಣ ಹೆಚ್ಚುತ್ತಿದ್ದು,ಯುವ ಜನಾಂಗ ಇದಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ನೀಲೇಶ ಎಂ.ಎನ್. ಕಳವಳ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಅರೋಗ್ಯಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆ ಹಾಗೂ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯುವಕರಲ್ಲಿ ಎಚ್.ಐ.ವ್ಹಿ/ಏಡ್ಸ್ ರೋಗವನ್ನು ತಡೆಗಟ್ಟುವದು ಅನಿವಾರ್ಯ. ಅರೋಗ್ಯಕರ ಜೀವನ ನಡೆಸಿ, ಏಡ್ಸ್ ರೋಗದಿಂದ ಮುಕ್ತರಾಗಬೇಕು. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಅತೀ ಅವಶ್ಯವಿದೆ. ಆದ್ದರಿಂದ ನಾವೆಲ್ಲರೂ ಎಚ್‌ಐವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡತಡೆಗಳನ್ನು ಕೊನೆಗಾಣಿಸೋಣ ಎಂದು ಕರೆ ನೀಡಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ವ್ಹಿ,ಬಿ. ತುರಕಾಣಿ ಮಾತನಾಡಿ, ಇದೊಂದು ಸಾಮಾಜಿಕ ಪಿಡುಗಾಗಿದ್ದು, ಎಷ್ಟೋ ಕುಟುಂಬಗಳು ಇದರಿಂದ ತುಂಬಾ ತೊಂದರೆಗಳನ್ನು ಅನುಭವಿಸಿವೆ. ಸಮಾಜದಲ್ಲಿ ಈ ರೋಗದ ಕುರಿತು ಕಳಂಕಿತ ಭಾವನೆ ಇದ್ದು, ಏಡ್ಸ್ ರೋಗಿಗಳನ್ನು ಸಮಾಜದಲ್ಲಿ ಇತರರಂತೆ ಗೌರವಯುತವಾಗಿ ಕಾಣಬೇಕು. ಎಚ್.ಐ.ವ್ಹಿ/ಏಡ್ಸ್ ರೋಗದ ಕುರಿತು ಕಳಂಕ ಮತ್ತು ತಾರತಮ್ಯ ಆಗುವುದನ್ನು ತಡೆಗಟ್ಟಬೇಕು ಎಂದರು.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಸ್.ವಾಯ್. ಹಿರೇಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅರೋಗ್ಯಾಧಿಕಾರಿ ಡಾ. ಚಂದ್ರಕಲಾ ಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸವಣೂರ ತಾಲೂಕಿನಲ್ಲಿ 829 ಸಕಾರಾತ್ಮಕ ರೋಗಿಗಳಿದ್ದು, ಇವರಲ್ಲಿ 700 ಆನ್ ಎ.ಆರ್.ಟಿ ಇದ್ದು 499 ರೋಗಿಗಳು ಜೀವಂತ ಇದ್ದಾರೆ. ಇಲ್ಲಿಯವರೆಗೂ 27 ಗರ್ಭಿಣಿಯರು ಸಕಾರಾತ್ಮಕ ಇದ್ದು, ಇವರ 43 ಮಕ್ಕಳಲ್ಲಿ 2 ಮಕ್ಕಳು ಸಕಾರಾತ್ಮಕ ಇದ್ದು ಉಳಿದ 41 ಮಕ್ಕಳು ನಕಾರಾತ್ಮಕವಾಗಿರುತ್ತಾರೆ ಎಂದು ಹೇಳಿದರು.ನ್ಯಾಯವಾದಿ ಎಮ್.ಎಮ್. ಪಾಟೀಲ ಎಚ್‌ಐವಿ/ಏಡ್ಸ್ ಹರಡುವ ವಿವಿಧ,ಲಕ್ಷಣಗಳು, ಪರೀಕ್ಷೆ ವಿಧಾನ ಹಾಗೂ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಎಫ್. ಎಂ. ಹಾದಿಮನಿ, ಡಾ. ಸ್ಮಿತಾ ಕುಲಕರ್ಣಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಇದ್ದರು. ಕಾರ್ಯಕ್ರಮದಲ್ಲಿ ಔಷಧ ಅಧಿಕಾರಿ, ರಾಮಕೃಷ್ಣ ಘಾಟಗೆ ಸ್ವಾಗತಿಸಿದರು.ಎಸ್.ಎಫ್. ಹನಕನಹಳ್ಳಿ ನಿರ್ವಹಿಸಿ, ಪ್ರಭು ಕಟ್ಟಿ ವಂದಿಸಿದರು.