ರಂಗಭೂಮಿ ಉಡುಪಿ ವತಿಯಿಂದ ನಡೆದ 46ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಉಡುಪಿಯ ಸುಮನಸಾ ಕೊಡವೂರು ತಂಡವು ಪ್ರದರ್ಶಿಸಿದ ‘ಈದಿ’ ಪ್ರಥಮ ಅತ್ಯುತ್ತಮ ನಾಟಕ ಪ್ರಶಸ್ತಿ ಗಳಿಸಿದೆ.

ಉಡುಪಿ: ರಂಗಭೂಮಿ ಉಡುಪಿ ವತಿಯಿಂದ ನಡೆದ 46ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಉಡುಪಿಯ ಸುಮನಸಾ ಕೊಡವೂರು ತಂಡವು ಪ್ರದರ್ಶಿಸಿದ ‘ಈದಿ’ ಪ್ರಥಮ ಅತ್ಯುತ್ತಮ ನಾಟಕ ಪ್ರಶಸ್ತಿ, ಡಾ.ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ ಮತ್ತು ದಿ.ಪುತ್ತು ವೈಕುಂಠ ಶೇಟ್ ಸ್ಮರಣಾರ್ಥ 35,000 ರು. ನಗದು ಬಹುಮಾನ ಗೆದ್ದುಕೊಂಡಿದೆ.

ಬೆಂಗಳೂರಿನ ಕ್ರಾನಿಕಲ್ಸ್ ಆಫ್ ಇಂಡಿಯಾ ತಂಡದ ‘ಶಿವೋಹಂ’ ನಾಟಕ ದ್ವಿತೀಯ ಬಹುಮಾನ, ದಿ.ಮಲ್ಪೆ ಮಧ್ವರಾಜ್ ಸ್ಮರಣಾರ್ಥ 25,000 ರು. ನಗದು ಮತ್ತು ಡಾ. ಆರ್.ಪಿ. ಕೊಪ್ಪೀಕರ್ ಸ್ಮರಣಾರ್ಥ ಪ್ರಶಸ್ತಿ ಫಲಕ ಗೆದ್ದುಕೊಂಡಿದೆ.

ಸಾಗರದ ಸ್ಪಂದನಾ ತಂಡದ ‘ಪ್ರಾಣಪದ್ಮಿನಿ’ ನಾಟಕವು ತೃತೀಯ ಬಹುಮಾನ, ದಿ. ಪಿ.ವಾಸುದೇವ ರಾವ್ ಅವರ ಸ್ಮರಣಾರ್ಥ 15,000 ನಗದು ಬಹುಮಾನ ತನ್ನದಾಗಿಸಿಕೊಂಡಿದೆ.

ಶ್ರೇಷ್ಠ ನಿರ್ದೇಶನ ಪ್ರಥಮ ಪ್ರಶಸ್ತಿಯನ್ನು ಈದಿ ನಾಟಕ ನಿರ್ದೇಶಿಸಿದ ವಿದ್ದು ಉಚ್ಚಿಲ್, ದ್ವಿತೀಯ ಪ್ರಶಸ್ತಿ ಶಿವೊಹಂ ನಾಟಕದ ನಿರ್ದೇಶಕ ಗಣೇಶ್ ಮಂದಾರ್ತಿ ಮತ್ತು ತೃತೀಯ ಪ್ರಶಸ್ತಿಯನ್ನು ಬೆಂಗಳೂರಿನ ನೆನಪು ತಂಡದ ಮಾಯಾದ್ವೀಪ ನಾಟಕದ ನಿರ್ದೇಶಕ ಪುನೀತ್ ಎ.ಎಸ್. ತನ್ನದಾಗಿಸಿಕೊಂಡಿದ್ದಾರೆ.ಶ್ರೇಷ್ಠ ನಟ ಪ್ರಥಮ ಪ್ರಶಸ್ತಿಯನ್ನು ಶಿವೋಹಂ ನಾಟಕದ ಮಂಜು ಕಾಸರಗೋಡು, ದ್ವಿತೀಯ ಪ್ರಶಸ್ತಿಯನ್ನು ಈದಿ ನಾಟಕದ ನಾಗೇಶ್ ಪ್ರಸಾದ್ ಮತ್ತು ತೃತೀಯ ಪ್ರಶಸ್ತಿಯನ್ನು ಪ್ರಾಣಪದ್ಮಿನಿ ನಾಟಕದ ಕಾರ್ತಿಕ್ ಕೆ. ಗೆದ್ದುಕೊಂಡಿದ್ದಾರೆ. ಶ್ರೇಷ್ಠ ನಟಿ ಪ್ರಥಮ ಪ್ರಶಸ್ತಿ ಈದಿ ನಾಟಕದ ಧೃತಿ ಸಂತೋಷ್, ದ್ವಿತೀಯ ಪ್ರಶಸ್ತಿ ಮೈಸೂರಿನ ನೇಪಥ್ಯ ರಂಗ ತಂಡದ ಒಡಲಾಳ ನಾಟಕದ ಚೈತನ್ಯ ಶಿವನಂಜ ಹಾಗೂ ತೃತೀಯ ಪ್ರಶಸ್ತಿ ಪ್ರಾಣಪದ್ಮಿನಿ ನಾಟಕದ ಭೂಮಿ ಅವರು ಪಡೆದುಕೊಂಡಿದ್ದಾರೆ.

ಶ್ರೇಷ್ಠ ಸಂಗೀತ ಪ್ರಥಮ ಪ್ರಶಸ್ತಿ ಶಿವೋಹಂ ನಾಟಕಕ್ಕೆ ಗಣೇಶ್ ಮಂದಾರ್ತಿ, ದ್ವಿತೀಯ ಪ್ರಶಸ್ತಿ ಪ್ರಾಣಪದ್ಮಿನಿ ನಾಟಕದ ಭಾರ್ಗವ ಹೆಗ್ಗೋಡು ಮತ್ತು ಅರುಣ್ ಕುಮಾರ್ ಹಾಗೂ ತೃತೀಯ ಪ್ರಶಸ್ತಿ ಮಾಯಾದ್ವೀಪ ನಾಟಕದ ಹರಿಪ್ರಸಾದ್ ಅವರಿಗೆ ನೀಡಲಾಗಿದೆ.