ವಿದ್ಯಾನಿಧಿ ಯೋಜನೆ ಮುಂದುವರಿಸಿ: ಎಬಿವಿಪಿ ಪ್ರತಿಭಟನೆ

| Published : Nov 07 2025, 02:30 AM IST

ವಿದ್ಯಾನಿಧಿ ಯೋಜನೆ ಮುಂದುವರಿಸಿ: ಎಬಿವಿಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಹಾಗೂ ರೈತ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾನಿಧಿ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಬಳ್ಳಾರಿ: ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಹಾಗೂ ರೈತ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾನಿಧಿ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಲಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕೃಷಿ ವೆಚ್ಚ ಹೆಚ್ಚುತ್ತಿದೆ. ಅದರಿಂದ ರೈತರು ತಮ್ಮ ಮೂಲ ವೃತ್ತಿಯಿಂದ ವಿಮುಖಗೊಳ್ಳುತ್ತಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ರೈತರು ಬೆಳೆಗಳು ನಾಶವಾಗುತ್ತಿದ್ದು, ಇದರಿಂದ ಅನ್ನದಾತರು ಸಾಲಗಾರರಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ರೈತರ ಹಿತ ಕಾಯುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಬೇಕು. ರೈತ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಈ ಹಿಂದಿನ ಸರ್ಕಾರ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿತ್ತು. ಆದರೆ, ಈ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿ, ರೈತರಿಗೆ ತೊಂದರೆಗೀಡು ಮಾಡಿದೆ. ಮಕ್ಕಳ ಶೈಕ್ಷಣಿಕ ಶುಲ್ಕ ಭರಿಸಲು ರೈತರು ಒದ್ದಾಡವಂತಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಗಡಗಿ ಚನ್ನಪ್ಪ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಕೆ. ದಿಲೀಪ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ. ಭರತ್ ಹಂಪಾಪಟ್ಟಣ, ನಗರ ಕಾರ್ಯದರ್ಶಿ ಆಂಜಿನೇಯ, ಸಂಘಟನೆಯ ಜಿಲ್ಲಾ ಪ್ರಮುಖರಾದ ಮಾರುತಿ, ದರ್ಶನ್, ವಂಶಿ, ಶಶಿಕಲಾ ನಂದಿನಿ, ಮಹೇಶ್, ಪ್ರಜ್ವಲ್, ಲೋಹಿತ್, ವಿನೋದ್ ಮತ್ತಿತರರು ಭಾಗವಹಿಸಿದ್ದರು.