ಕನ್ನಡಪ್ರಭ ವಾರ್ತೆ ಬೆಂಗಳೂರು
ಎನುಮರೇಷನ್ ಫಾರ್ಮ್ ಹಂಚಿಕೆ ಕೆಲಸ ಸೋಮವಾರ ಸಂಜೆ ಒಳಗೆ ಪೂರ್ಣಗೊಳಿಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಕೆ.ವಿ.ಎಚ್ಚರಿಕೆ ನೀಡಿದ್ದಾರೆ.ಭಾನುವಾರ ಬಿಎಲ್ಒ ಮೇಲ್ವಿಚಾರಕರ ಸಭೆ ನಡೆಸಿದ ಅವರು, ಎನುಮರೇಷನ್ ಫಾರ್ಮ್‌ನಲ್ಲಿ (ಗಣತಿ ನಮೂನೆ) ಮೊದಲೇ ಮುದ್ರಣಗೊಂಡಿರುವ ಮತದಾರರ ವಿಳಾಸಕ್ಕೆ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಭೇಟಿ ನೀಡಲೇಬೇಕು ಎಂದರು.
ಅಲ್ಲದೆ, ಮತಗಟ್ಟೆ ಅಧಿಕಾರಿ (ಬಿಎಲ್‌ಒ)ಗಳು ತಮ್ಮ ವ್ಯಾಪ್ತಿಯಲ್ಲಿ ಎಲ್ಲಾ ಮನೆಗಳಿಗೆ ಭೇಟಿ ನೀಡಿ, ಗಣತಿ ನಮೂನೆ ವಿತರಿಸಿರುವ ಬಗ್ಗೆ ಬಿಎಲ್‌ಒ ಮೇಲ್ವಿಚಾರಕರು ಖಚಿತಪಡಿಸಿಕೊಳ್ಳಲು ಸೂಚಿಸಿದರು. ಬಿಎಲ್‌ಒಗಳು ಮನೆಗೆ ಭೇಟಿ ವೇಳೆ ಎಎಸ್‌ಡಿ (ಗೈರು, ಸ್ಥಳಾಂತರ, ನಿಧನ) ಪಟ್ಟಿ ಅಪ್ಡೇಟ್ ಮಾಡಬೇಕು. ಮತದಾರರು ವಿಳಾಸ ಬದಲಿಸಿದ್ದಲ್ಲಿ (ಸ್ಥಳಾಂತರ), ಅರ್ಜಿ ಸಲ್ಲಿಸಿ ಮತದಾರರ ಚೀಟಿಯಲ್ಲೂ ವಿಳಾಸ ಬದಲಿಸುವುದು ಮತದಾರರ ಕರ್ತವ್ಯವಾಗಿದ್ದು, ಅಂಥ ಮತದಾರರು ನಮೂನೆ-6 (ಫಾರ್ಮ್ 6) ಸಲ್ಲಿಸಿ ಮತದಾನದ ಹಕ್ಕು ಪಡೆದುಕೊಳ್ಳಲು ಅವಕಾಶವಿದೆ. ಪತ್ತೆಯಾಗದ ಮತದಾರರ ಬಗ್ಗೆ ವಾರ್ಡ್ ಅಧಿಕಾರಿಗೆ ಮಾಹಿತಿ ನೀಡಬೇಕು. ಎಲ್ಲಾ ಬಿಎಲ್‌ಒಗಳು ನಿಯಮ ಸ್ಪಷ್ಟವಾಗಿ ಅರಿತು ಗೊಂದಲವಿಲ್ಲದೆ ನಿಗದಿತ ಸಮಯದ ಒಳಗೆ ಕೆಲಸ ಪೂರ್ಣಗೊಳಿಸುವಂತೆ ನಿಗಾ ವಹಿಸಬೇಕು ಎಂದರು.ಎಫ್‌ಐಆರ್ ದಾಖಲಿಸಬೇಕು:
ಇದಲ್ಲದೆ, ಬಿಎಲ್‌ಒಗಳ ಕೆಲಸಕ್ಕೆ ಅಡ್ಡಿಯುಂಟು ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಕೆಲಸದಲ್ಲಿ ಶ್ರದ್ಧೆ ತೋರದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪೂರಕವಾಗಿ ಸ್ಪಂದಿಸದ ಇತರೆ ಇಲಾಖೆಗಳ ಸಿಬ್ಬಂದಿ (ಬಿಎಲ್‌ಒ) ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ತಿಳಿಸಲಾಗುವುದು. ಗಣತಿ ನಮೂನೆ ಸಿಗದೆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆದರೂ ನಮೂನೆ-6 ಸಲ್ಲಿಸುವ ಮೂಲಕ ಹೆಸರು ಸೇರ್ಪಡೆಗೊಳಿಸಬಹುದು. ಈ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ ಎಂದರು.
ಗಣತಿ ನಮೂನೆ ಹಿಂತಿರುಗಿಸಲು ತಡ ಮಾಡಿದಲ್ಲಿ ಡಿಜಿಟೈಸೇಶನ್ ತಡವಾಗಿ ಕರಡು ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಬಹುದು ಎಂಬ ಬಗ್ಗೆ ಮನವರಿಕೆ ಮಾಡಿಕೊಡಬೇಕು, ಗಣತಿ ನಮೂನೆ ಸಂಗ್ರಹಕ್ಕೆ ವಿದ್ಯಾರ್ಥಿಗಳು, ಮಾರ್ಷಲ್‌ಗಳನ್ನು ಬಳಸಿಕೊಳ್ಳಲು ಅವಕಾಶ ಇದೆ. ಮತದಾರರು ಗಣತಿ ನಮೂನೆ ಭರ್ತಿ ಮಾಡಿ ಹಿಂತಿರುಗಿಸುವುದರ ಮಹತ್ವದ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಬಿಎಲ್‌ಎಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಸಂದರ್ಭದಲ್ಲಿ ಜಂಟಿ ಆಯುಕ್ತ ಡಾ. ಆರತಿ ಆನಂದ್, ಉಪ ಆಯುಕ್ತ ಶಂಕರಪ್ಪ ವಣಿಕ್ಯಾಳ ಹಾಜರಿದ್ದರು.