ಸಾರಾಂಶ
- ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಕಾರ್ಯಕ್ರಮದಲ್ಲಿ
- - -ಕನ್ನಡಪ್ರಭ ವಾರ್ತೆ ಜಗಳೂರು
ಕೃಷಿ ಪರಿಕರಗಳನ್ನು ಸರಿಯಾದ ಕ್ರಮದಲ್ಲಿ ಅಗತ್ಯ ದಾಖಲಾತಿ ನಿರ್ವಹಣೆ ಮಾಡಿ, ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು. ಒಂದುವೇಳೆ ಸರಿಯಾದ ದಾಖಲೆಗಳನ್ನು ನಿರ್ವಹಿಸಿ, ಕಾನೂನು ಬಾಹಿರವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಮಾರಾಟ ಮಾಡಿದರೆ ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳು ಹಿಂದೆ ಮುಂದೆ ನೋಡುವುದಿಲ್ಲ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಅಶೋಕ ಎಸ್. ಎಚ್ಚರಿಕೆ ನೀಡಿದರು.ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ಜಗಳೂರಿನ ಕೃಷಿ ಇಲಾಖೆ ಕಚೇರಿ ವತಿಯಿಂದ ತಾಲೂಕಿನ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳಪೆ ಬಿತ್ತನೆಬೀಜ ಮತ್ತು ರಸಗೊಬ್ಬರ ಹಾಗೂ ಔಷಧಗಳನ್ನು ಮಾರಾಟ ಮಾಡಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ರದ್ದು ಪಡಿಸಲಾಗುವುದು. ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೃಷಿ ಪರಿಕರ ಮಾರಾಟಗಾರರು ಎಲ್ಲ ಕೃಷಿ ಪರಿಕರಗಳಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕರಾದ ಎಚ್.ಶ್ವೇತಾ ಮಾತನಾಡಿ, ಉತ್ತಮ ಗುಣಮಟ್ಟದ ಬಿತ್ತನೆಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಜಗಳೂರು ತಾಲೂಕಿನ ರೈತರಿಗೆ ಮಾತ್ರ ನಿಗದಿತ ಬೆಲೆಯಲ್ಲಿ ಸಕಾಲಕ್ಕೆ ನೀಡಬೇಕೆಂದು ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ಬಳಕೆ ಮಹತ್ವ ರೈತರಿಗೆ ತಿಳಿಸಲು ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು.
ಕೃಷಿ ಪರಿಕರ ಮಾರಾಟಗಾರರ ತಾಲೂಕಿನ ಸಂಘದ ಅಧ್ಯಕ್ಷ ಕೆಚ್ಚೇನಹಳ್ಳಿ ಸಿದ್ದೇಶ್ ಮಾತನಾಡಿ, ಕಾಂಪ್ಲೆಕ್ಸ್ ರಸಗೊಬ್ಬರಗಳ ಬಳಕೆ ಮಹತ್ವ ಕುರಿತು ರೈತರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಅಗತ್ಯ ದಾಖಲಾತಿ ನಿರ್ವಹಣೆ ಮಾಡಿ, ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಕೀಟನಾಶಕ ಮತ್ತು ರಸಗೊಬ್ಬರಗಳನ್ನು ರೈತರಿಗೆ ನೀಡುವ ಭರವಸೆ ನೀಡಿದರು.ಕೃಷಿ ಇಲಾಖೆಯ ಜಾರಿ ದಳ ಸಹಾಯಕ ಕೃಷಿ ನಿರ್ದೇಶಕ ಬಿ.ವಿ. ಶ್ರೀನಿವಾಸುಲು, ತಾಲೂಕಿನ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ ಬಿತ್ತನೆಬೀಜ, ಕೀಟನಾಶಕ ಮತ್ತು ರಸಗೊಬ್ಬರ ಕಾಯ್ದೆಗಳ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉಪನ್ಯಾಸ ನೀಡಿದರು.
ಈ ವೇಳೆ ಕೋರಮಂಡಲ್ ಫರ್ಟಿಲೈಜರ್ಸ್ ಸಂಸ್ಥೆ ಪ್ರತಿನಿಧಿ ಉಮೇಶ್, ಕೃಷಿ ಅಧಿಕಾರಿಗಳಾದ ಲಾವಣ್ಯ, ಜೀವಿತಾ, ಗಿರೀಶ್ ಜೆ. ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.- - -
-13ಜೆಎಲ್ಆರ್ಚಿತ್ರ2:ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಕೃಷಿ ಪರಿಕರ ಮಾರಾಟಗಾರರ ತರಬೇತಿ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಎಚ್.ಶ್ವೇತಾ ಮಾತನಾಡಿದರು.