ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಮಕ್ಕಳು ಸೃಷ್ಟಿಕರ್ತರು. ಈ ಅರಿವನ್ನು ನಮ್ಮ ಶಿಕ್ಷಣ ಅವರಲ್ಲಿ ಜಾಗೃತಗೊಳಿಸಬೇಕು. ಮಕ್ಕಳು ಹೊಸ ಸಮಾಜ, ಕಾಲ, ದೇಶದ ಪ್ರತಿನಿಧಿಗಳಾಗಿರುತ್ತಾರೆ. ಪೋಷಕರು ಹಾಗೂ ಈ ಸಮಾಜ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡಿ.ಆರ್.ನಾಗರಾಜ್ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ಪ್ರಕಾಶ್ ಮಂಟೇದ ಹೇಳಿದರು.ಅವರು, ತಾಲೂಕಿನ ಕಂಟನಕುಂಟೆ ಶಾಲೆಯಲ್ಲಿ ಡಾ.ಡಿ.ಆರ್.ನಾಗರಾಜ್ ಬಳಗ ಹಾಗೂ ವಾಯ್ಸ್ ಆಫ್ ಆ್ಯಕ್ಷನ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಒಂಬತ್ತು ದಿನಗಳ ಚಿಲಿಪಿಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಮನೋವಿಕಸನದ ಹಿನ್ನೆಲೆಯಲ್ಲಿ ಪೋಷಕರೂ ಕೂಡ ಸೂಕ್ಷ್ಮ ಪಾತ್ರ ನಿರ್ವಹಿಸಬೇಕಿದೆ. ಮಕ್ಕಳೆದುರು ಬರೀ ವಸ್ತುಗಳನ್ನು ತೆರೆದಿಡುವುದಲ್ಲ, ಬದಲಾಗಿ ಅವರ ಮನಸ್ಸು ಅರಳುವಂತಹ ವಾತಾವರಣ ಸೃಷ್ಟಿ ಮಾಡಬೇಕು. ಈ ಮೂಲಕ ಸಮಾಜವನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆಗಳನ್ನು ಮಕ್ಕಳ ಗ್ರಹಿಕೆಗೆ ತರಬೇಕು ಎಂದರು.ಚಿತ್ರ ಹಾಗೂ ಆನಿಮೇಶನ್ ಕಲಾವಿದೆ ಗೀತಾ ಮೌರ್ಯ ಮಾತನಾಡಿ, ಇಂತಹ ಶಿಬಿರಗಳಿಂದ ಮಕ್ಕಳ ಮನೋಭಾವನೆಗಳ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಇಂದಿನ ಶಿಕ್ಷಣ ಇಂತಹ ಸಮಗ್ರ ಮಕ್ಕಳ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಗಮನಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸಾದಿಕ್ ಪಾಷಾ ಮಾತನಾಡಿ, ಈ ಬೇಸಿಗೆ ಶಿಬಿರ ಮಕ್ಕಳಿಗೆ ಮೊಬೈಲ್ ನಿಂದ ದೂರವಿದ್ದು ಇತರೆ ಆಸಕ್ತಿ, ಕುತೂಹಲ, ಅಭಿರುಚಿಗಳ ಕಡೆ ಗಮನಹರಿಸುವಂತೆ ಮಾಡಿದೆ. ಇದು ಸಂತಸದ ವಿಷಯ. ಶಿಬಿರದ ಮಕ್ಕಳನ್ನು ಪೊಲೀಸ್ ಠಾಣೆಗೂ ಕರೆತಂದು ಮಕ್ಕಳ ಜೊತೆ ಸಂವಾದಕ್ಕೆ ಅವಕಾಶ ನೀಡಲಾಗಿತ್ತು. ಪೊಲೀಸ್ ವ್ಯವಸ್ಥೆಯ ಪರಿಚಯ ಮಾಡುವುದರ ಮೂಲಕ ಪೊಲೀಸರ ಬಗ್ಗೆ ಮಕ್ಕಳಿಗಿರುವ ಭಯ ಮತ್ತು ಆತಂಕಗಳನ್ನು ದೂರಮಾಡಲಾಗಿದೆ. ಶಿಬಿರವು ಸಾರ್ವಜನಿಕರು, ಪೋಷಕರೂ ಹಾಗೂ ಸಮಾಜಪರ ಕಾಳಜಿಯುಳ್ಳವರಿಂದ ಆಯೋಜನೆಗೊಂಡಿರುವುದು ವಿಶೇಷ ಎಂದರು.ಮಂಡ್ಯದ ಪೊಲೀಸ್ ಅಧಿಕಾರಿ ಶಿವಪ್ರಸಾದ್ ರಾವ್, ಮಕ್ಕಳು ಮಾನವೀಯ ಗುಣದ ಮೂಲಕ ಉತ್ತುಂಗಕ್ಕೆ ಏರಿ, ಬದುಕಿನ ತಳಮಟ್ಟಕ್ಕಿಳಿಯುವ ಜ್ಞಾನ ಮತ್ತು ವಿವೇಕವನ್ನು ಹೊಂದುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಪರಿಣಾಮಕಾರಿ ಎಂದರು.
ವಿಧಾನಸೌಧ ತಹಸೀಲ್ದಾರ್ ಅಂಬುಜಾ, ಶಿಬಿರದ ಸಂಯೋಜಕ ವೆಂಕಟೇಶ್ ಕೊನಘಟ್ಟ, ವಾಯ್ಸ್ ಆಫ್ ಆ್ಯಕ್ಷನ್ ಟ್ರಸ್ಟ್ ನ ಕಾಂತರಾಜು ಮಾತನಾಡಿ, ತಮ್ಮ ಆಲೋಚನೆಗಳನ್ನು ಪ್ರಸ್ತಾಪಿಸಿದರು. ಮಕ್ಕಳು ಶಿಬಿರದ ಅನುಭವಗಳನ್ನು ಹಂಚಿಕೊಂಡರು.ಮಕ್ಕಳು ಶಿಬಿರದಲ್ಲಿ ಕಲಿತ ಮೈಮ್ ಹಾಗೂ ನೆಲ- ಜಲ ಉಳಿಸುವ ನಾಟಕ, ಹಾಡು, ಕುಣಿತ ಪ್ರದರ್ಶನಗೊಂಡವು. ಮಕ್ಕಳ ಹಕ್ಕುಗಳು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿತ್ತು. ಸೌಭಾಗ್ಯ ಸೇವಾ ಟ್ರಸ್ಟಿನ ರಾಜಗೋಪಾಲ್, ವಕೀಲ ದಯಾನಂದಗೌಡ, ಪೊಲೀಸ್ ಇಲಾಖೆಯ ಚಂದ್ರಶೇಖರ್, ಡಿ.ಆರ್.ನಾಗರಾಜ್ ಬಳಗದ ಹೇಮಂತ್ ಲಿಂಗಪ್ಪ, ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.