ಸಾರಾಂಶ
ಮುಂಡಗೋಡ: ಆಡುವ ಮಾತು ಮನಸು, ಬುದ್ಧಿ, ನಡೆ-ನುಡಿ ಒಂದಾಗಿದ್ದರೆ ಅದು ಮಂತ್ರವೂ ಆಗುತ್ತದೆ; ಜೋತೀರ್ಲಿಂಗವೂ ಆಗುತ್ತದೆ. ದಾರಿ ತಪ್ಪಿದರೆ ಸೂತಕವಾಗುತ್ತದೆ. ಹಾಗಾಗಿ ಮಾತನ್ನು ಸೂತಕ ಮಾಡಿಕೊಳ್ಳಬಾರದು ಎಂದು ತರಳಬಾಳು ಸಂಸ್ಥಾನ ಶಾಖಾ ಮಠ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.ವಿಶ್ವಗುರು ಬಸವೇಶ್ವರರನ್ನು ರಾಜ್ಯ ಸರ್ಕಾರ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಇಲ್ಲಿಯ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಬಸವ ಸಂಸ್ಕೃತಿ ಅಭಿಯಾನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾವೆಲ್ಲರೂ ಮಾನವರು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಬಂದರೆ ಮಾತ್ರ ಸಮಾಜದಲ್ಲಿ ಸಮಾನತೆ ಎಂಬುದು ತಾನಾಗಿಯೇ ಬರುತ್ತದೆ. ಆದರೆ ಇಂದಿನ ಸ್ಥಿತಿ ನೋಡಿದರೆ ಎಲ್ಲಿಯೂ ಸಮಾನತೆ ಕಾಣುತ್ತಿಲ್ಲ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಸಮಾನತೆ ಕಾಣುತ್ತಿದ್ದೇವೆ. ಇದನ್ನು ತೊಡೆದು ಹಾಕಬೇಕಾದರೆ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ೧೨ನೇ ಶತಮಾನದಲ್ಲಿ ನಡೆದ ಬದಲಾವಣೆ ಕ್ರಾಂತಿಯಿಂದ ಬಸವಣ್ಣನವರು ಸಾಂಸ್ಕೃತಿಕ ನಾಯಕರಾದರು ಎಂದರು.ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾಧ್ಯಕ್ಷ ಮಾಜಿ ಶಾಸಕ ವಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಚರಿಸಲಾಗುವ ಬಹಳಷ್ಟು ಜಯಂತಿಗಳು ಒಂದೊಂದು ಸಮಾಜಕ್ಕೆ ಮಾತ್ರ ಸೀಮಿತ ಎಂಬ ಭಾವನೆ ಇರುತ್ತದೆ. ಆದರೆ ಎಲ್ಲ ಸಮಾಜದ ಮುಖಂಡರನ್ನು ಒಂದು ಕಡೆಗೆ ಸೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಜೀವನದಲ್ಲಿ ಮುಂದೆ ಗುರಿ, ಹಿಂದೆ ಗುರು ಇರಬೇಕು. ಗುರು ಇಲ್ಲದಿದ್ದರೆ ಗುರಿ ತಲುಪಲು ಸಾಧ್ಯವಿಲ್ಲ. ೧೨ನೇ ಶತಮಾನದಲ್ಲಿ ಮನುಕುಲಕ್ಕೆ ಸನಾತನ ಸಂಸ್ಕೃತಿ ಸಂದೇಶ ನೀಡಿದ ಬಸವಣ್ಣಗೆ ನಮನ ಸಲ್ಲಿಸಬೇಕಾದ ಕರ್ತವ್ಯ ನಮ್ಮದು. ಇಂತಹ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಭಾಗ್ಯ ಎಂದರು.ಕಾರ್ಯಕ್ರಮದಲ್ಲಿ ಶರಣರಲ್ಲಿ ಸೂತಕದ ವಿವರಣೆ, ಶರಣರ ಸಮ ಸಮಾಜ ಕುರಿತು ಡಾ. ಗಂಗಾಂಬಿಕೆ. ಅಕ್ಕ ಹಾಗೂ ಡಾ.ಅಶೋಕ ಬರಗುಂಡಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಗದಗ-ಡಂಬಳ ಯಡೆಯೂರು ಜ.ಡಾ.ತೋಂಟದಾರ್ಯ ಸಂಸ್ಥಾನದ ಸಿದ್ದರಾಮ ಶ್ರೀ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರು, ಕೂಡಲಸಂಗಮ ಬಸವಧರ್ಮ ಮಹಾಪೀಠದ ಗಂಗಾ ಮಾತಾಜಿ, ಇಳಕಲ್-ಹುನಗುಂದ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನದ ಗುರುಮಹಾಂತ ಶಿವಯೋಗಿಗಳು, ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮಿ, ಅತ್ತಿವೇರಿ ಬಸವಧಾಮ ಮಾತೆ ಬಸವೇಶ್ವರಿ, ಬಸವಕಲ್ಯಾಣ ಲಿಂಗವಂತ ಹರಳಯ್ಯ ಪೀಠದ ಮಾತೆ ಡಾ.ಗಂಗಾಂಬಿಕಾ, ಶರಣ ಚಿಂತಕ ಅಶೋಕ ಬರಗುಂಡಿ, ಬನವಾಸಿ ಅಲ್ಲಮಪ್ರಭು ದೇವರ ಹೊಳೆ ಮಠದ ನಾಗಭೂಷಣ ಸ್ವಾಮಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಶ್ರೀ, ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಸವರಾಜ ಪಾಟೀಲ, ಧುರೀಣ ಬಸವರಾಜ ಓಶಿಮಠ ಶಿವದೇವ ದೇಸಾಯಿಸ್ವಾಮಿ, ಸುಮಂಗಲಾ ಅಂಗಡಿ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಹಳೂರ ಹಿರೇಮಠದ ರುದ್ರಮುನಿ ಶ್ರೀ, ಜ್ಯೋತಿ ಪಾಟೀಲ, ಶಿವಲಿಂಗಯ್ಯ ಅಲ್ಲಯ್ಯನಮಠ, ರವಿಗೌಡ ಪಾಟೀಲ, ಎಲ್.ಟಿ. ಪಾಟೀಲ, ಬಸವರಾಜ ನಡುವಿನಮನಿ, ಇದ್ದರು.ಬಸವರಾಜ ಪಾಟೀಲ ಸ್ವಾಗತಿಸಿದರು. ಶ್ರೀಶೈಲ ಐನಾಪುರ ನಿರೂಪಿಸಿದರು. ಎಂ.ಎಸ್. ಕಾರ್ಕಳ ವಂದಿಸಿದರು.