ತಾಯಿ- ಅಕ್ಕ ಭೇಟಿ ಬಳಿಕ ಲವಲವಿಕೆಯಿಂದ ಇರುವ ನಟ ದರ್ಶನ್

| Published : Sep 21 2024, 01:59 AM IST

ಸಾರಾಂಶ

ತಾಯಿ ಹಾಗೂ ಅಕ್ಕ ನೀಡಿದ್ದ ಬೇಕರಿ ತಿನಿಸುಗಳು ಹಾಗೂ ಡ್ರೈಫ್ರೂರ್ಟ್ಸ್‌ ಗಳನ್ನು ಸೇವಿಸಿದ ದರ್ಶನ್ ಇಡೀ ದಿನ ಖುಷಿ ಖುಷಿಯಾಗಿಯೇ ಸೆಲ್‌ನಲ್ಲಿ ಕಾಲ ಕಳೆದಿದ್ದಾರೆ.

ಬಳ್ಳಾರಿ: ಕೊಲೆ ಪ್ರಕರಣದ ಆರೋಪದ ಹಿನ್ನೆಲೆ ಬಳ್ಳಾರಿಯ ಕೇಂದ್ರ ಕಾರಾಗೃಹದ ಹೈಸೆಕ್ಯೂರಿಟಿ ಸೆಲ್‌ನಲ್ಲಿರುವ ಆರೋಪಿ ನಟ ದರ್ಶನ್‌, ತಾಯಿ ಮೀನಾ ತೂಗುದೀಪ ಗುರುವಾರ ಭೇಟಿಯಾದ ಬಳಿಕ ಜೈಲಿನಲ್ಲಿ ಲವಲವಿಕೆಯಿಂದ ಇದ್ದಾರೆ.

ತಾಯಿ ಹಾಗೂ ಅಕ್ಕ ನೀಡಿದ್ದ ಬೇಕರಿ ತಿನಿಸುಗಳು ಹಾಗೂ ಡ್ರೈಫ್ರೂರ್ಟ್ಸ್‌ ಗಳನ್ನು ಸೇವಿಸಿದ ದರ್ಶನ್ ಇಡೀ ದಿನ ಖುಷಿ ಖುಷಿಯಾಗಿಯೇ ಸೆಲ್‌ನಲ್ಲಿ ಕಾಲ ಕಳೆದಿದ್ದಾರೆ.

ಉಪಹಾರ ಹಾಗೂ ಊಟದ ಬಳಿಕ ನಿದ್ರೆಗೆ ಜಾರುತ್ತಿರುವ ದರ್ಶನ್ ಸಮಯ ಕಳೆಯಲು ಪುಸ್ತಕ ಓದುತ್ತಿದ್ದಾರೆ. ಗುರುವಾರ ಜೈಲಿಗೆ ಆಗಮಿಸಿದ್ದ ಅಕ್ಕ ದಿವ್ಯಾ ಕೆಲ ಪುಸ್ತಕಗಳನ್ನು ನೀಡಿದ್ದಾರೆ. ಹೊತ್ತು ಕಳೆಯಲು ನಟ ನಿದ್ರೆ ಹಾಗೂ ಪುಸ್ತಕ ಓದಿಗೆ ಹೆಚ್ಚು ಸಮಯ ನಿಗದಿಗೊಳಿಸಿಕೊಂಡಿದ್ದಾರೆ ಎಂದು ಜೈಲಿನ ಸಿಬ್ಬಂದಿ ಮೂಲಗಳು ತಿಳಿಸಿವೆ.

ನಟನ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿರುವ ಜೈಲಿನ ಅಧಿಕಾರಿಗಳು ಪ್ರತಿ ಎರಡು ದಿನಕ್ಕೊಮ್ಮೆ ಜೈಲಿನ ವೈದ್ಯಾಧಿಕಾರಿಗಳ ಮೂಲಕ ಆರೋಗ್ಯ ತಪಾಸಣೆ ಕೈಗೊಂಡು ರೆಕಾರ್ಡ್‌ ಮಾಡುತ್ತಿದ್ದಾರೆ.

ಪತಿಯನ್ನು ಭೇಟಿ ಮಾಡಲು ಜೈಲಿಗೆ ಆಗಮಿಸುತ್ತಿದ್ದ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೆಲ್‌ನಲ್ಲಿ ಏಕಾಂಗಿಯಾಗಿ ಇರುವುದರಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ದರ್ಶನ್ ಅವರ ಆರೋಗ್ಯದ ಕಡೆ ನಿಗಾ ಇಡುವಂತೆ ವಿಜಯಲಕ್ಷ್ಮಿ ಜೈಲಿನ ಅಧಿಕಾರಿಗಳ ಮನವಿ ಮಾಡಿಕೊಂಡಿದ್ದಾರಂತೆ.

ಶುಕ್ರವಾರ ಜೈಲಿನ ಕೈದಿಗಳಿಗೆ ಮಾಂಸದ ಊಟ ನೀಡಿದ್ದು ನಟ ದರ್ಶನ ಸಹ ಮಾಂಸದ ಊಟ ಸೇವಿಸಿದ್ದಾರೆ. ದಿನಕ್ಕೆ ಎರಡು ಬಾರಿ ಬ್ಯಾರಕ್ ಆವರಣದಲ್ಲಿ ದರ್ಶನ್ ವಾಕಿಂಗ್ ಮಾಡುತ್ತಿದ್ದು, ಆರೋಗ್ಯದ ಕಡೆ ಗಮನ ನೀಡಿದ್ದಾರೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ.

ದರ್ಶನ್‌ ಪರ ವಕೀಲರು ಶನಿವಾರ ಭೇಟಿ ನೀಡಿ, ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಹಿ ಪಡೆದು ಸೋಮವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.