ಸಾರಾಂಶ
ಆಲೂರು: ವಿದ್ಯಾರ್ಥಿಗಳು ಕೇವಲ ಓದು ಬರಹಕ್ಕೆ ಸೀಮಿತವಾಗದೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ತಿಳಿಸಿದರು.
ಆಲೂರು: ವಿದ್ಯಾರ್ಥಿಗಳು ಕೇವಲ ಓದು ಬರಹಕ್ಕೆ ಸೀಮಿತವಾಗದೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ತಿಳಿಸಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಿಕ್ಷಣ ಇಲಾಖೆ ಸಂಪನ್ಮೂಲ ಕೇಂದ್ರ ಆಲೂರು ಇವರ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯ ರೂಪಿಸುವ ಇಲಾಖೆ ಮಕ್ಕಳ ಪ್ರತಿಭೆ ಹೊರಹಾಕುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪಾಲಕರ ಸಹಕಾರವು ಅಷ್ಟೇ ಮುಖ್ಯವಾಗಿದೆ. ಸಮಾಜಕ್ಕೆ ಮಕ್ಕಳ ಪ್ರತಿಭೆ ತೋರಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಶಿಕ್ಷಕರ ಜೊತೆ ಪಾಲಕರು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪ್ರತಿಭಾ ಕಾರಂಜಿ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳು ಆಧುನಿಕ ಯುಗದಲ್ಲಿ ಸ್ಪರ್ಧೆ ಎದುರಿಸಿ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಸಾಮಾಜಿಕ ಕಳಕಳಿ ಬೆಳೆಸುವುದು ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಬೇಗಂ, ದೈಹಿಕ ಪರಿವೀಕ್ಷಕರು ಗೋವಿಂದೇಗೌಡ, ರವಿಕಿರಣ್, ದಿವಾಕರ್, ಮಂಜುಳಮ್ಮ, ತಿಮ್ಮಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮೃತೇಶ್, ಕಾರ್ಯದರ್ಶಿ ಶ್ರೀನಿವಾಸ್, ಗೌರವಾಧ್ಯಕ್ಷ ಚೆನ್ನಿ ಗ್ರಾಮಯ್ಯ, ನೌಕರ ಸಂಘದ ಗೌರವಾಧ್ಯಕ್ಷ ವರದರಾಜ್, ಪದವೀಧರ ಸಂಘದ ಅಧ್ಯಕ್ಷ ಭೂಪಾಲಯ್ಯ,ರವಿ, ಪರಮೇಶ್, ಬೇಬಿ ಹಾಜೀರ, ಬಿಆರ್‌ಪಿ ಸಿಆರ್‌ಪಿ ಮುಂತಾದವರು ಭಾಗವಹಿಸಿದ್ದರು.