ಸಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸಿ: ಸಚಿವ ತಂಗಡಗಿ

| Published : Sep 30 2025, 12:00 AM IST

ಸಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸಿ: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಅ. 6ರಂದು ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಕೊಪ್ಪಳ: ಅ. 6ರಂದು ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಎರಡನೇ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜನರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಶಕ್ತಿಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಯನ್ನು ಜಾರಿಗೊಳಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೇರವಾಗಿ ಗ್ಯಾರಂಟಿ ಯೋಜನೆಗಳ ಲಾಭ ಸಿಗುವಂತೆ ಮಾಡಿದೆ. ಇದರ ಜತೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ದಿಶೆಯಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲು ಮುಖ್ಯಮಂತ್ರಿ ಕೊಪ್ಪಳಕ್ಕೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಲು ಈಗಾಗಲೇ ರಚಿಸಲ್ಪಟ್ಟ ಸಮಿತಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಾನಿಯಾದ ಬೆಳೆಗಳಿಗೆ ತಕ್ಷಣ ಪರಿಹಾರ ನೀಡಲು ಆಯಾ ತಾಲೂಕುಗಳ ತಹಸೀಲ್ದಾರರು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಅ. 5ರೊಳಗೆ ಪೂರ್ಣಗೊಳಿಸುವಂತೆ ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ, ಗ್ರಾಮವಾರು ಕಮಿಟಿ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿ, ₹2 ಸಾವಿರ 5 ಕೋಟಿಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿವೆ. ಪ್ರತಿ ತಾಲೂಕುವಾರು ತಹಸೀಲ್ದಾರ್‌ ಮತ್ತು ಇಒಗಳನ್ನು ಒಳಗೊಂಡ ಸಮಿತಿ ಮಾಡಲಾಗಿದೆ. 83,655 ಫಲಾನುಭವಿಗಳ ಪಟ್ಟಿ ಮಾಡಲಾಗಿದೆ. ಕಾರ್ಯಕ್ರಮ ಮುಗಿಯುವ ವರೆಗೆ ಅಧಿಕಾರಿ ಮತ್ತು ಸಿಬ್ಬಂದಿ ಯಾರೂ ರಜೆಯ ಮೇಲೆ ಹೋಗಬಾರದು ಎಂದು ಹೇಳಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಉಪಸ್ಥಿತರಿದ್ದರು.