ಧರ್ಮ ಹಿಂದೂ, ಜಾತಿ ಮಾದಿಗ ಎಂದು ಬರೆಸಿ: ಅಲ್ಕೋಡ

| Published : Sep 30 2025, 12:00 AM IST

ಧರ್ಮ ಹಿಂದೂ, ಜಾತಿ ಮಾದಿಗ ಎಂದು ಬರೆಸಿ: ಅಲ್ಕೋಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ ಎಂದು ಹಾಗೂ ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸುವಂತೆ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಅಲ್ಕೋಡ ಹನುಮಂತಪ್ಪ ಮನವಿ ಮಾಡಿದ್ದಾರೆ.

ಕೊಪ್ಪಳ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ ಎಂದು ಹಾಗೂ ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸುವಂತೆ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಅಲ್ಕೋಡ ಹನುಮಂತಪ್ಪ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರು ಜಾಗ್ರತರಾಗಿ ತಮ್ಮ ಮಾಹಿತಿ ನಮೂದು ಮಾಡಬೇಕು. ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕೆಲವರು ಸುಳ್ಳು ಸಂದೇಶಗಳನ್ನು ಹರಿಬಿಟ್ಟು, ದಿಕ್ಕು ತಪ್ಪಿಸುತ್ತಿದ್ದಾರೆ. ಮಾದಿಗ ಸಮಾಜದವರು ಇದಕ್ಕೆ ಕಿವಿಗೊಡದೆ ಸಮೀಕ್ಷೆಯಲ್ಲಿ ಮಾಹಿತಿ ನಮೂದಿಸಬೇಕು. ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೆ ಧರ್ಮ ಕಾಲಂನಲ್ಲಿ ಹಿಂದೂ ಎಂದು ಹಾಗೂ ಜಾತಿ ಕಾಲಂನಲ್ಲಿ ಮಾದಿಗ ಎಂದು, ಉಪಜಾತಿ ಕಾಲಂನಲ್ಲಿಯೂ ಮಾದಿಗ ಎಂದೇ ಬರೆಸಿ ಎಂದರು.

ಶ್ರೀ ಮಾದರ ಚನ್ನಯ್ಯ ಸ್ವಾಮೀಜಿಗಳು ಧರ್ಮ ಕಾಲಂನಲ್ಲಿ ಲಿಂಗಾಯತ ಮಾದಿಗ ಎಂದು ಬರೆಯಿಸುವಂತೆ ಕೋರಿದ್ದಾರೆ ಎನ್ನುವ ಸುಳ್ಳುಸುದ್ದಿ ಹರಿದಾಡುತ್ತಿದೆ. ಆದರೆ, ಇದನ್ನು ಸ್ವಾಮೀಜಿಗಳೇ ನಾನು ಹೇಳಿಯೇ ಇಲ್ಲ ಎಂದಿದ್ದಾರೆ. ನಾನು ಸಹ ಅವರ ಜತೆಯಲ್ಲಿ ಮಾತನಾಡಿದ್ದೇನೆ. ಅವರು ನಾನು ಹಾಗೆ ಹೇಳದಿದ್ದರೂ ಯಾಕೆ ಈ ರೀತಿ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾನೇ ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಹೆಸರಿನಲ್ಲಿ ಹರಿಬಿಟ್ಟವರ ವಿರುದ್ಧ ದೂರು ನೀಡಿ ಎಂದು ಸಲಹೆ ನೀಡಿದ್ದೇನೆ ಎಂದರು.

ಒಳಮೀಸಲಾತಿ ಜಾರಿ ಮಾಡುವ ವೇಳೆಯಲ್ಲಿ ಒಂದಷ್ಟು ತಪ್ಪುಗಳಾಗಿವೆ. ಆದರೂ ನಾವು ಪ್ರಶ್ನೆ ಮಾಡದೆ ಒಪ್ಪಿಕೊಂಡಿದ್ದೇವೆ. ಆದರೆ, ತಪ್ಪು ಮಾಹಿತಿಯ ಆಧಾರದಲ್ಲಿ ಒಂದಿಷ್ಟು ಜನರು ಅಧಿಕ ಮೀಸಲಾತಿ ಸೌಲಭ್ಯ ಪಡೆದಿದ್ದಾರೆ. ಇದನ್ನು ನಾವು ಸೇರಿದಂತೆ ವಂಚಿತರು ಪ್ರಶ್ನೆ ಮಾಡಬೇಕಾಗಿದೆ ಎಂದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮತ್ಯಾವುದಾದರೂ ಆಯೋಗದಿಂದ ಬರುವ ಅಂಕಿ-ಸಂಖ್ಯೆಯ ಮಾಹಿತಿಯಿಂದ ಆಗಿರುವ ದೋಷವನ್ನು ತಿದ್ದುವುದಾಗಿ ಹೇಳಿದ್ದಾರೆ. ಹೀಗಾಗಿ, ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯ ಸೂಕ್ತ ಮಾಹಿತಿ ದಾಖಲಿಸುವಂತೆ ಕೋರಿದರು.

ಮುಖಂಡರಾದ ಮಹಾಲಕ್ಷ್ಮಿ ಕಂದಾರಿ, ಅಶೋಕ ದೊಡ್ಡಮನಿ, ಆನಂದ ಕರ್ಕಿಹಳ್ಳಿ, ಶಾಂತಕುಮಾರ ದೊಡ್ಡಮನಿ ಇದ್ದರು.