ಸಾರಾಂಶ
ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಹೆಸರು, ವಿಳಾಸ ಬರೆಯುವ ಮೂಲಕ ವೈಯಕ್ತಿಕ ವಿವರಗಳನ್ನು ಬಹಿರಂಗಗೊಳಿಸಿ ದುರಾಚಾರ ಎಸಗಿರುವ 8 ಅಭ್ಯರ್ಥಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರುಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಹೆಸರು, ವಿಳಾಸ ಬರೆಯುವ ಮೂಲಕ ವೈಯಕ್ತಿಕ ವಿವರಗಳನ್ನು ಬಹಿರಂಗಗೊಳಿಸಿ ದುರಾಚಾರ ಎಸಗಿರುವ 8 ಅಭ್ಯರ್ಥಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.2023ರ ನ.4ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಪತ್ರಲೇಖನದಲ್ಲಿ ಅಭ್ಯರ್ಥಿತನವನ್ನು ಬಹಿರಂಗಪಡಿಸಿರುವ 8 ಅಭ್ಯರ್ಥಿಗಳಿಗೆ ಇ-ಮೇಲ್ ಮತ್ತು ಅಂಚೆ ಮೂಲಕ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಮಾ.4ರ ಒಳಗೆ ಸಮಜಾಯಿಷಿ ನೀಡಬೇಕು. ಇಲ್ಲದಿದ್ದರೆ ನಿಯಮಾನುಸಾರ ಏಕಪಕ್ಷೀಯವಾಗಿ ಆಯೋಗದಿಂದ ಕ್ರಮ ಕೈಗೊಳ್ಳಲಾಗುತ್ತದೆ. ಅಭ್ಯರ್ಥಿತನ ರದ್ದುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 384 ಕೆಎಎಸ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಂದರ್ಶನಕ್ಕೆ 25 ಅಂಕಗಳನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸಭೆ ಸದಸ್ಯರಾದ ವಿಠ್ಠಲ ಸೋಮಣ್ಣ ಹಲಗೇಕರ್ ಅವರು ಕೇಳಿದ ಪ್ರಶ್ನೆಗೆ ಸದನಕ್ಕೆ ಉತ್ತರ ನೀಡಿರುವ ಸಿಎಂ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ. ನೇರ ನೇಮಕಾತಿ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದೆ. ಪೂರ್ವಭಾವಿ ಪರೀಕ್ಷೆಗೆ 400 ಅಂಕಗಳು ಇರುತ್ತವೆ. ಮುಖ್ಯ ಪರೀಕ್ಷೆಗೆ 1,250 ಅಂಕಗಳು ಮತ್ತು ಸಂದರ್ಶನಕ್ಕೆ 25 ಅಂಕಗಳನ್ನು ನಿಗದಿಪಡಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸುವ ಅಭ್ಯರ್ಥಿಗಳಿಗೆ ನಡೆಸುವ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಸೇರಿ ಒಟ್ಟು 1,275 ಅಂಕಗಳು ಇರುತ್ತವೆ ಎಂದು ತಿಳಿಸಿದ್ದಾರೆ.ಈ ಹಿಂದೆ ಸಂದರ್ಶನಕ್ಕೆ 50 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಸಂದರ್ಶನದಲ್ಲಿ ಅಕ್ರಮ ನಡೆಯುವ ಕುರಿತು ವ್ಯಾಪಕ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸಂದರ್ಶನ ಅಂಕಗಳನ್ನು 25ಕ್ಕೆ ಇಳಿಸಿ 2022ರ ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.