ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಲೇಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.ಸ್ಥಳೀಯ ತಾಪಂ ಸಭಾಂಗಣದಲ್ಲಿ ಶನಿವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಕರೆದಿದ್ದ ಸಭೆ ಪ್ರಾರಂಭವಾಗುತ್ತಿದ್ದಂತೆ ಎಲ್ಲ ಗ್ರಾಪಂಗಳ ಪಿಡಿಒಗಳಿಂದ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆ, ಬೋರ್ವೆಲ್ ಮತ್ತು ನದಿ ಪಾತ್ರದ ಗ್ರಾಮಗಳ ನೀರಿನ ಪರಿಸ್ಥಿತಿ ಬಗ್ಗೆ ಶಾಸಕರು ಮಾಹಿತಿ ಪಡೆದುಕೊಂಡರು.ತಾಲೂಕು ವ್ಯಾಪ್ತಿಯಲ್ಲಿ 139 ಕೆರೆಗಳಿದ್ದು, ಸದ್ಯ ಸಂಗ್ರಹವಿರುವ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ಕುಡಿಯಲು ಯೋಗ್ಯವಿಲ್ಲವೆಂದು ವರದಿ ಬಂದರೆ ಅವುಗಳನ್ನು ಸಂಪೂರ್ಣ ಖಾಲಿ ಮಾಡಿ, ಸ್ವಚ್ಛಗೊಳಿಸಿ ಮಾ.೫ ರಿಂದ ಕಾಲುವೆಗೆ ಬರುವ ನೀರನ್ನು ತುಂಬಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಾ.5 ರಿಂದ 12ರವರೆಗೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎಡದಂಡೆ ನಾಲೆಯ ಮೂಲಕ ನೀರು ಹರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ನೀರಾವರಿ, ಪಂಚಾಯತ್ ರಾಜ್, ಜೆಸ್ಕಾಂ, ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ತಾಲೂಕು ವ್ಯಾಪ್ತಿಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಜನರಿಗೆ ಆಗಬಹುದಾದ ಸಮಸ್ಯೆಗಳಿಗೆ ಅಧಿಕಾರಿ ವರ್ಗದವರೆ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಯೊಂದು ಗ್ರಾಪಂ ಪಿಡಿಒಗಳಿಂದ ಕುಡಿಯುವ ನೀರಿನ ವರದಿ ಕೇಳಿದ ಶಾಸಕರಿಗೆ, ಗೊರೇಬಾಳ, ರಾಗಲಪರ್ವಿ, ಉದ್ಬಾಳ, ಬಸಾಪುರ, ಹೊಸಳ್ಳಿ ಇ.ಜೆ, ಜವಳಗೇರಾ ಮತ್ತಿತರ ಗ್ರಾಮ ಪಂಚಾಯಿತಿಗಳ ಪಿಡಿಒಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಹಾಗೂ ಕ್ಯಾಂಪಿನ ಕೆರೆಗಳಲ್ಲಿ ನೀರು ಖಾಲಿ ಆಗಿವೆ. ಕೆಲವೊಂದು ಕೆರೆಯಲ್ಲಿ ಶೇ.೧೦, ೨೦, ೩೦ರಷ್ಟು ನೀರು ಇದೆಯೆಂದು ಹೇಳಿದ್ದರಿಂದ ಕೋಪಗೊಂಡ ಹಂಪನಗೌಡರು ‘ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವಂತೆ ಕೆರೆ ಖಾಲಿ ಆಗುವವರೆಗೂ ನಿದ್ದೆ ಮಾಡುತ್ತಿದ್ದೀರಾ’ ಎಂದು ತರಾಟೆಗೆ ತೆಗೆದುಕೊಂಡರು.
ಬಸಾಪುರ, ಜಾಲಿಹಾಳ, ಬಂಗಾರಿ ಕ್ಯಾಂಪ್, ಸಾಲುಗಂದಾ, ಯದ್ದಲದೊಡ್ಡಿ, ಉದ್ಬಾಳ ಹೀಗೆ ವಿವಿಧ ಗ್ರಾಮಗಳಲ್ಲಿ ಕೆರೆಗಳಿಗೆ ಪೈಪ್‌ಲೈನ್ ಅಳವಡಿಸಲು ಹೆಚ್ಚಿನ ಹಣದ ಅವಶ್ಯಕತೆ ಇದ್ದರೆ ಕೆಲಸಗಳ ಪಟ್ಟಿ ಮಾಡಿ ಕೊಟ್ಟರೆ ತಮ್ಮ ಅನುದಾನದಲ್ಲಿ ಹಣ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ ಶಾಸಕರು, ಯಾವುದೇ ಕಾರಣಕ್ಕೂ ೧೪ ಮತ್ತು ೧೫ನೇ ಹಣಕಾಸು ಯೋಜನೆಯ ಹಣವನ್ನು ಬೇರೆ ಕೆಲಸಗಳಿಗೆ ಬಳಸದೆ, ಕುಡಿಯುವ ನೀರಿನ ಸೌಕರ್ಯ ಒದಗಿಸುವ ಕಾಮಗಾರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸೂಚಿಸಿದರು.ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಪಂಚಾಯತ್‌ರಾಜ್ ಗ್ರಾಮೀಣ ಕುಡಿಯುವ ನೀರು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜನಿಯರ್ ಶಿವಪ್ಪ ಐಹೊಳೆ, ತಾಪಂ ಸಹಾಯಕ ನಿರ್ದೇಶಕ ಅಮರಗುಂಡಪ್ಪ ಇದ್ದರು.