ವಿದ್ಯಾರ್ಥಿಗಳು ಹದಿಹರೆಯದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಈ ಅವಧಿಯಲ್ಲಿ ಸಹಜವಾಗಿ ಭಾವನಾತ್ಮಕ, ದೈಹಿಕ ಹಾಗೂ ಮಾನಸಿಕವಾಗಿ ಬದಲಾವಣೆಗಳಾಗುತ್ತವೆ.

ಕುಂದಗೋಳ:

ಹದಿಹರೆಯವು ವಿದ್ಯಾರ್ಥಿ ಜೀವನದ ಒಂದು ಸಂಕ್ರಮಣ ಕಾಲ. ಅದು ಜೀವನದ ಒಂದು ರೋಮಾಂಚನಕಾರಿಯಾದ ಅವಧಿಯಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಹೇಳಿದರು.

ತಾಲೂಕಿನ ಗುಡಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದಿಂದ ಆಯೋಜಿಸಿದ್ದ ಹದಿಹರೆಯದ ಸಮಸ್ಯೆಗಳು ಹಾಗೂ ಪರಿಹಾರೋಪಾಯ ವಿಷಯ ಕುರಿತು ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳು ಹದಿಹರೆಯದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಈ ಅವಧಿಯಲ್ಲಿ ಸಹಜವಾಗಿ ಭಾವನಾತ್ಮಕ, ದೈಹಿಕ ಹಾಗೂ ಮಾನಸಿಕವಾಗಿ ಬದಲಾವಣೆಗಳಾಗುತ್ತವೆ. ಸಿಟ್ಟು, ಖಿನ್ನತೆ, ಆತಂಕ, ಲೈಂಗಿಕ ಆಕರ್ಷಣೆ, ಹತಾಶೆ ಮನೋಭಾವ ಉಂಟಾಗುತ್ತವೆ. ವಿದ್ಯಾರ್ಥಿಗಳು ತಾವು ಕಂಡ ಕನಸು ನನಸಾಗದೇ ಇದ್ದರೆ ದುಶ್ಚಟಗಳಿಗೆ ಬಲಿಯಾಗಬಹುದು ಎಂದ ಅವರು, ಸಮೂಹ ಮಾಧ್ಯಮಗಳೂ ಸಹ ವಿದ್ಯಾರ್ಥಿಗಳ ಮನಸ್ಸನ್ನು ಕಲ್ಮಶಗೊಳಿಸುತ್ತವೆ. ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಏಕಾಗ್ರತೆಗೆ ಭಂಗ ಉಂಟಾಗುತ್ತದೆ. ಈ ದಿಸೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ಆರೋಗ್ಯಕರ ಜೀವನ ಶೈಲಿ ಹೊಂದುವಂತೆ ಕರೆ ನೀಡಿದರು.

ಸಂಶಿಯ ಕೆಎಲ್‌ಇ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಮೇಶ ಅತ್ತಿಗೇರಿ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದಲ್ಲಿ ಎಂತಹ ಸಮಸ್ಯೆ ಎದುರಾದರೂ ಧೃತಿಗೆಡದೆ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ನಿಮ್ಮ ಭವಿಷ್ಯದ ನಿರ್ಮಾತೃಗಳು ನೀವೇ. ಕೀಳು ಅಭಿರುಚಿ ತ್ಯಜಿಸಿ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಹದಿಹರೆಯ ವಿದ್ಯಾರ್ಥಿ ಜೀವನದ ವಸಂತಕಾಲ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತವಾಗುವಂತೆ ಬದುಕಬೇಕೆ ವಿನಃ ಸಮಾಜಕ್ಕೆ ಹೊರೆಯಾಗಬಾರದು. ಪರಿಶುದ್ಧ ಭಾವನೆಯಿಂದ ಬದುಕಿ ಕುಟುಂಬ ಹಾಗೂ ಸಮಾಜಕ್ಕೆ ಭರವಸೆಯ ವ್ಯಕ್ತಿಗಳಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಅಪ್ಪಣ್ಣ ಹುಂಡೇಕಾರ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಗಂಗಾಧರ ಗುಮ್ಮಗೋಳಮಠ ಮಾತನಾಡಿದರು. ವೈ.ಎಚ್. ಬೀರಣ್ಣವರ ಸ್ವಾಗತಿಸಿದರು. ಕವಿವ ಸಂಘದ ಶಿಕ್ಷಣ ಮಂಟಪ ಸಂಚಾಲಕ ವೀರಣ್ಣ ವಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಶಂಭಯ್ಯ ಹಿರೇಮಠ, ಡಾ. ಹನುಮಂತ ಕಲ್ಲೋಳಿಕರ, ದೇವರಾಜು, ಚೇತನಾ, ಡಾ. ಸಂಗಮೇಶ ಬಸರಕೋಡ, ಮೆಹಬೂಬ್‌ ಶೇಖ, ವೀರೇಶ ಶಹಪೂರಕರ ಸೇರಿದಂತೆ ಹಲವರಿದ್ದರು. ಡಾ. ಭೀಮೇಶ ಯರಡೋಣಿ ನಿರೂಪಿಸಿದರು. ಬಿ.ಸಿ. ಅಮಾತಿ ವಂದಿಸಿದರು.