ಸಾರಾಂಶ
ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದ ಜಿಲ್ಲೆಯಲ್ಲಿ ೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆದಿರುವ ರೈತ ಕುಟುಂಬಗಳಿಗೆ ವಾರ್ಷಿಕ ಹದಿನೇಳುವರೆ ಸಾವಿರ ಬೆಲೆಬಾಳುವ ಗೊಬ್ಬರ ಹಾಗೂ ಪೋಷಕಾಂಶಗಳನ್ನು ವಿತರಿಸಲಾಗುತ್ತಿದೆ. ರೈತರು ತೆಂಗಿನ ಬೆಳೆಗೆ ಮಾತ್ರ ಗೊಬ್ಬರವನ್ನು ಉಪಯೋಗಿಸಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಭತ್ತ ಮತ್ತು ಕಬ್ಬು ಬೆಳೆಯ ಜೊತೆಗೆ ಕಬ್ಬು ಬೆಳೆಯನ್ನು ರೈತರು ಉಪ ಕಸುಬಾಗಿ ಅಳವಡಿಸಿಕೊಂಡಾಗ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.ನಗರದ ತೋಟಗಾರಿಕೆ ಇಲಾಖೆ ಕಚೇರಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ವತಿಯಿಂದ ೨೦೨೪-೨೫ ನೇ ಸಾಲಿನ ತೆಂಗು ಬೆಳೆಯಲ್ಲಿ ರೋಗ ಮತ್ತು ಕೀಟಗಳ ನಿಯಂತ್ರಣದ ಬಗ್ಗೆ ರೈತರಿಗೆ ವಿಚಾರ ಸಂಕಿರಣ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯಡಿ ರೈತರಿಗೆ ಪರಿಕರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದ ಜಿಲ್ಲೆಯಲ್ಲಿ ೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆದಿರುವ ರೈತ ಕುಟುಂಬಗಳಿಗೆ ವಾರ್ಷಿಕ ಹದಿನೇಳುವರೆ ಸಾವಿರ ಬೆಲೆಬಾಳುವ ಗೊಬ್ಬರ ಹಾಗೂ ಪೋಷಕಾಂಶಗಳನ್ನು ವಿತರಿಸಲಾಗುತ್ತಿದೆ. ರೈತರು ತೆಂಗಿನ ಬೆಳೆಗೆ ಮಾತ್ರ ಗೊಬ್ಬರವನ್ನು ಉಪಯೋಗಿಸುವಂತೆ ಸಲಹೆ ನೀಡಿದರು.ತೆಂಗಿನ ಗಿಡ ನೆಟ್ಟು ಒಂದರಿಂದ ಎರಡು ವರ್ಷ ಆಗಿರುವ ರೈತರನ್ನು ಈ ವ್ಯಾಪ್ತಿಗೆ ತರಬೇಕು ಎಂದು ಚಿಂತನೆ ಮಾಡಲಾಗಿದ್ದು ಅಕ್ಕ ಪಕ್ಕದ ರೈತರಿಗೂ ಈ ವಿಚಾರವನ್ನು ತಿಳಿಸಿ ತೋಟಗಾರಿಕೆ ಇಲಾಖೆಯಲ್ಲಿ ರೈತರು ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ ಮಾತನಾಡಿ, ಫಸಲನ್ನು ಕೊಡುತ್ತಿರುವ ತೆಂಗಿನ ಮರಗಳನ್ನು ಪುನಶ್ಚೇತನಗೊಳಿಸಲು ಪೋಷಕಾಂಶಗಳನ್ನು ವಿತರಿಸಲಾಗುತ್ತಿದೆ. ಈಗ ಎಲ್ಲಾ ಕಡೆ ತೆಂಗಿನ ಮರಗಳು ಹಾಳಾಗುತ್ತಿದೆ. ರೈತರು ಭತ್ತಕ್ಕೆ ಹಾಗೂ ರಾಗಿಗೆ ಕೊಡುವಷ್ಟು ಗೊಬ್ಬರ ಮತ್ತು ಪೋಷಕಾಂಶಗಳನ್ನು ತೆಂಗು ಬೆಳೆಗೆ ಕೊಡುವುದಿಲ್ಲ. ಒಂದಷ್ಟು ಫಸಲು ಬಂದ ಮೇಲೆ ಕಾಯಿ, ಎಳನೀರು ಎಂದು ಗಮನಹರಿಸುತ್ತಾರೆ. ಉತ್ತಮ ಇಳುವರಿಗೆ ಅಗತ್ಯ ಪೋಷಕಾಂಶ ಹಾಗೂ ಗೊಬ್ಬರವನ್ನು ನೀಡುವುದು ಅವಶ್ಯ. ಅದಕ್ಕಾಗಿ ಎರಡು ವರ್ಷಗಳಿಗೆ ಫಸಲು ಬಿಡುವ ತೆಂಗು ಬೆಳೆಯುವ ರೈತರನ್ನು ಆಯ್ಕೆ ಮಾಡಿಕೊಂಡು ಅವರಿಗೆ ವಿವಿಧ ಹಂತದಲ್ಲಿ ಸಾವಯವ ಗೊಬ್ಬರ, ಸಮಗ್ರ ಪೋಷಕಾಂಶ, ಸಮಗ್ರ ಕೀಟ ನಿಯಂತ್ರಣ ಮಾಡಲು ಹಲವಾರು ಔಷಧಿಗಳು ಹಾಗೂ ಗೊಬ್ಬರಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಿದ್ದೇವೆ. ತೆಂಗು ಅಭಿವೃದ್ಧಿ ಮಂಡಳಿಯವರು ಮೊದಲೆಲ್ಲ ಜಿಲ್ಲೆಗೆ ಹೆಚ್ಚಿನ ಅನುದಾನ ಕೊಡುತ್ತಿರಲಿಲ್ಲ. ಈ ಬಾರಿ ಜಿಲ್ಲೆಯಲ್ಲಿ ೫೦೦೦ ಎಕರೆ ಪ್ರದೇಶಕ್ಕೆ ತೆಂಗು ಅಭಿವೃದ್ಧಿ ಮಂಡಳಿಯವರು ಗೊಬ್ಬರಗಳನ್ನು ಕೊಡುತ್ತಿದ್ದಾರೆ ಎಂದರು.
ಕೃಷಿ ವಿಜ್ಞಾನಿ ಡಾ.ವೆಂಕಟೇಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಶಿಕಲಾ, ಮುಖಂಡ ಜವರೇಗೌಡ ಇದ್ದರು.