ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ಕುಮಟಾದ ಗಿಬ್ ಹೈಸ್ಕೂಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರದ ವಿವಿಧ ನೀತಿ ಖಂಡಿಸಿದರು.
ಕುಮಟಾ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶನಿವಾರ ಇಲ್ಲಿಯ ಗಿಬ್ ಹೈಸ್ಕೂಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಬಿಜೆಪಿ ರಾಜ್ಯ ಸಹಸಂಚಾಲಕ ಎಂ.ಜಿ. ಭಟ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರದ ಆಡಳಿತ ವೈಖರಿಗೆ ಎಲ್ಲರೂ ಬೇಸತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಮುಳುಗುವ ಹಂತದಲ್ಲಿದೆ. ಕೆಇಬಿ ಈಗಾಗಲೇ ಮುಳುಗಿದೆ. ಎಲ್ಲ ಕಡೆಗಳಿಂದ ಬೆಲೆ ಏರಿಕೆ ಮಾಡುತ್ತಿದ್ದಾರೆ. ಒಂದು ಕಡೆ ಹೆಂಗಸರ ಮತಗಳ ಓಲೈಕೆ ಮಾಡುವುದಕ್ಕಾಗಿ ಶಕ್ತಿ ಮುಂತಾದ ಯೋಜನೆಗಳನ್ನು ತರುತ್ತಿದ್ದಾರೆ. ಹೆಂಗಸರು ಅರ್ಥ ಮಾಡಿಕೊಳ್ಳಬೇಕು. ಕೇವಲ ₹೨೦೦೦ ಆಸೆಗೆ ಬಲಿಯಾಗಿ ಇಡೀ ತಿಂಗಳ ವೆಚ್ಚ ಹೆಚ್ಚುತ್ತಿದೆ. ₹೨೦೦೦ ಕೊಟ್ಟು ₹10 ಸಾವಿರ ಕೇಳುತ್ತಿದೆ ಸರ್ಕಾರ. ಬೆಲೆ ಏರಿಕೆ ಮಾತ್ರವಲ್ಲ, ಹಿಂದು ವಿರೋಧಿ ಮಾನಸಿಕತೆ ಇಡೀ ರಾಜ್ಯಕ್ಕೆ ಮಾರಕವಾಗಿದೆ. ಪೆಟ್ರೋಲ್ ಬಾಂಬ್, ಕಲ್ಲು ಎಸೆದವರನ್ನು ಬಿಟ್ಟು ಹಿಂದೂಗಳ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ನಾಗಮಂಗಲದಂತಹ ಪ್ರಕರಣಗಳು ಅದಕ್ಕೆ ಉದಾಹರಣೆಯಾಗಿದೆ. ದಾಳಿ ಮಾಡಿಸಿಕೊಂಡವರೇ ಪ್ರಕರಣ ಎದುರಿಸಬೇಕಾದ ದುಸ್ಥಿತಿ ಇದೆ. ಹಗರಣಗಳು ಮಿತಿಮೀರಿದೆ. ಬಾಣಂತಿಯರ ಸಾವಿನ ಪ್ರಕರಣಗಳು ನಿಂತಿಲ್ಲ. ಕನಿಕರ ಮಾನವೀಯತೆ ಇಲ್ಲ. ಶಾಸಕರಿಗೆ ರಕ್ಷಣೆಯಿಲ್ಲದ ರಾವಣ ರಾಜ್ಯದಲ್ಲಿ ನಾವಿದ್ದೇವೆ. ಮುಸ್ಲಿಂ ಓಲೈಕೆ, ಹಿಂದುಗಳ ದಮನ ಮತ್ತು ದುಡ್ಡು ಹೇಗೆ ಮಾಡುವುದು ಎಂಬುದನ್ನು ಬಿಟ್ಟರೆ ರಾಜ್ಯ ದಿವಾಳಿಯಾದರೂ ಅವರಿಗೆ ಚಿಂತೆ ಇಲ್ಲ. ಇಂಥ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದರು.ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ದುಷ್ಪರಿಣಾಮ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಸಮಗ್ರವಾಗಿ ವಿವರಿಸಿದರು. ಪ್ರಶಾಂತ ನಾಯ್ಕ, ಅಶೋಕ ಪ್ರಭು, ಚೇತೇಶ ಶಾನಭಾಗ, ಜಿ.ಎಸ್. ಗುನಗಾ, ಎಂ.ಎಂ. ಹೆಗಡೆ, ಗಣೇಶ ಪಂಡಿತ, ಪ್ರಸಾದ ನಾಯಕ ಇನ್ನಿತರರು ಇದ್ದರು.