ಮಲೆನಾಡಲ್ಲಿ ಆನೆ ಹಾವಳಿ ತಡೆಗೆ ಆನೆ ವಿಹಾರಧಾಮ - ಅರಣ್ಯ ಇಲಾಖೆಯಿಂದ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಯೋಜನೆ

| Published : Jan 04 2025, 11:22 AM IST

Wild Elephant
ಮಲೆನಾಡಲ್ಲಿ ಆನೆ ಹಾವಳಿ ತಡೆಗೆ ಆನೆ ವಿಹಾರಧಾಮ - ಅರಣ್ಯ ಇಲಾಖೆಯಿಂದ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು  ಜಿಲ್ಲೆಗಳಲ್ಲಿನ ಆನೆಗಳ ಹಾವಳಿ ತಡೆಗೆ ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯ ವ್ಯಾಪ್ತಿಯ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಎಲಿಫೆಂಟ್ ಸಾಫ್ಟ್‌ ರಿಲೀಸ್‌ ಸೆಂಟರ್‌ ನಿರ್ಮಾಣಕ್ಕೆ  ಯೋಜನೆ ರೂಪಿಸುತ್ತಿದ್ದು, 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಯೋಜನೆ ಘೋಷಿಸುವ ಸಾಧ್ಯತೆಗಳಿವೆ.

ಬೆಂಗಳೂರು : ಮಲೆನಾಡು ಭಾಗದ ಜಿಲ್ಲೆಗಳಲ್ಲಿನ ಆನೆಗಳ ಹಾವಳಿ ತಡೆಗೆ ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯ ವ್ಯಾಪ್ತಿಯ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಎಲಿಫೆಂಟ್ ಸಾಫ್ಟ್‌ ರಿಲೀಸ್‌ ಸೆಂಟರ್‌ ನಿರ್ಮಾಣಕ್ಕೆ ಅರಣ್ಯ ಇಲಾಖೆ ಯೋಜನೆ ರೂಪಿಸುತ್ತಿದ್ದು, 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಯೋಜನೆ ಘೋಷಿಸುವ ಸಾಧ್ಯತೆಗಳಿವೆ.

ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚಿನ ಆನೆಗಳು ಕಾಡಂಚಿನ ಗ್ರಾಮಗಳಿಗೆ ಪದೇಪದೆ ದಾಳಿ ಮಾಡಿ ಬೆಳೆ ಮತ್ತು ಪ್ರಾಣ ಹಾನಿ ಮಾಡುತ್ತಿವೆ. ಇದರಿಂದಾಗಿ ಆ ಭಾಗದ ರೈತರು ಸಮಸ್ಯೆಗೊಳಗಾಗಿದ್ದು, ಆನೆಗಳ ದಾಳಿ ತಪ್ಪಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್‌ ರಿಲೀಸ್‌ ಸೆಂಟರ್‌) ಯೋಜನೆ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಯೋಜನೆಯಂತೆ ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ.

ದೇಶದಲ್ಲೇ ಮೊದಲ ಯೋಜನೆ:

ಆನೆಗಳ ಹಾವಳಿ ತಡೆಗಾಗಿ ದೇಶದಲ್ಲೇ ಮೊದಲ ಬಾರಿ ರಾಜ್ಯದಲ್ಲಿ ಆನೆಗಳ ವಿಹಾರಧಾಮ ನಿರ್ಮಿಸಲಾಗುತ್ತಿದೆ. ಈವರೆಗೆ ಆನೆ ಹಾವಳಿ ತಡೆಗೆ ಕಾಡಂಚಿನಲ್ಲಿ ಸೋಲಾರ್‌ ಫೆನ್ಸಿಂಗ್‌, ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ ಹಾಗೂ ಟ್ರಂಚ್‌ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಆನೆ-ವನ್ಯಜೀವಿ ಸಂಘರ್ಷ ತಡೆಗಾಗಿ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದ ಸುತ್ತಲೂ ಸೋಲಾರ್‌ ಫೆನ್ಸಿಂಗ್‌, ರೈಲ್ವೆ ಬ್ಯಾರಿಕೇಡ್‌ಗಳ ಅಳವಡಿಕೆ ಹಾಗೂ ಟ್ರಂಚ್‌ಗಳನ್ನು ಮಾಡಲಾಗುತ್ತದೆ. ಅದರ ಜತೆಗೆ ಆನೆಗಳಿಗೆ ಇಷ್ಟವಾದ ಬಿದಿರನ್ನು ಗುಂಪು ಗುಂಪಾಗಿ ಬೆಳೆಸಲೂ ಯೋಜಿಸಲಾಗಿದೆ. ಆ ಮೂಲಕ ನೈಸರ್ಗಿಕ ಬೇಲಿ ನಿರ್ಮಾಣ ಮಾಡುವ ಯೋಜನೆಯೂ ಇದೆ. ಅದರ ಜತೆಗೆ ಅರಣ್ಯ ಪ್ರದೇಶದಲ್ಲಿ ಹಲಸು ಸಸಿಗಳನ್ನು ನೆಡುವುದು, ಹುಲ್ಲುಗಾವಲು ಬೆಳೆಸುವ ಮೂಲಕ ಆನೆಗಳನ್ನು 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಿಂದ ಹೊರಬರದಂತೆ ನೋಡಿಕೊಳ್ಳಲಾಗುತ್ತದೆ.

200ಕ್ಕೂ ಹೆಚ್ಚಿನ ಆನೆಗಳು ಆನೆ ವಿಹಾರಧಾಮಕ್ಕೆ:

ಅರಣ್ಯ ಇಲಾಖೆ ಗುರುತಿಸಿರುವಂತೆ ಕೊಡಗು ಜಿಲ್ಲೆಯಲ್ಲಿ 120, ಹಾಸನದಲ್ಲಿ 63 ಹಾಗೂ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 15ರಿಂದ 20 ಆನೆಗಳು ಪದೇ ಪದೆ ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುತ್ತಿವೆ. ಆ ಆನೆಗಳನ್ನು ಹಂತಹಂತವಾಗಿ ಹಿಡಿದು ಆನೆ ವಿಹಾರಧಾಮಕ್ಕೆ ಬಿಡಲಾಗುತ್ತದೆ. ಅದರಿಂದ ಆನೆಗಳು ಮತ್ತೆ ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ.

ರಾಜ್ಯ ಬಜೆಟ್‌ನಲ್ಲಿ ಘೋಷಣೆ?: ಆನೆ ವಿಹಾರಧಾಮ ಯೋಜನೆಯ ರೂಪುರೇಷೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ. ಸದ್ಯದ ಅಂದಾಜಿನಂತೆ ಯೋಜನೆಗೆ 100 ಕೋಟಿ ರು. ವೆಚ್ಚವಾಗಲಿದೆ. 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಯೋಜನೆ ಘೋಷಿಸಿ, ಅಗತ್ಯ ಅನುದಾನ ಮೀಸಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಜತೆಗೆ ಮುಖ್ಯಮಂತ್ರಿಗಳ ಜತೆ ನಡೆಯಲಿರುವ ಬಜೆಟ್‌ ಮುಂಚಿನ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ.

ಆನೆಗಳು ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡಿ ಬೆಳೆ ಹಾನಿ ಮತ್ತು ಜೀವ ಹಾನಿ ಮಾಡುವುದನ್ನು ತಪ್ಪಿಸಲು ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ನಿರ್ಮಿಸಲು ಯೋಜಿಸಲಾಗಿದೆ. ಯೋಜನೆಗೆ 100 ಕೋಟಿ ರು. ವೆಚ್ಚವಾಗುವ ಅಂದಾಜಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು.

- ಈಶ್ವರ್‌ ಖಂಡ್ರೆ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಅರಣ್ಯ ಸಚಿವ