ಸಿರುಗುಪ್ಪ: ರೈತರು ಹತ್ತಿ ಬೆಳೆಯಲ್ಲಿ ಉತ್ಪಾದಕತೆ ಹಾಗೂ ಲಾಭದಾಯಕತೆ ಹೆಚ್ಚಿಸಲು ಹೆಚ್ಚಿನ ಸಾಂದ್ರತೆಯ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಕೃಷಿ ವಿಜ್ಞಾನಿ ಡಾ.ಜಯಪ್ರಕಾಶ್ ನಿಡಗುಂಡಿ ಹೇಳಿದರು.

ತಾಲೂಕಿನ ಬೀರಳ್ಳಿ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡ ಹತ್ತಿ ಬೆಳೆಯಲ್ಲಿ ‌ಅಧಿಕ ಸಾಂದ್ರತೆಯ ಬೇಸಾಯ ಮಾಡುವ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹತ್ತಿ ಬೆಳೆ ಪದ್ಧತಿಯ ಮಹತ್ವ, ಕಡಿಮೆ ಅಂತರದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಿ ಪ್ರತಿ ಎಕರೆಗೆ ಹೆಚ್ಚಿನ ಸಸ್ಯ ಸಾಂದ್ರತೆ ಕಾಪಾಡುವ ಪದ್ಧತಿ, ಬಿತ್ತನೆ ಮತ್ತು ಬೀಜ, ಪೋಷಕಾಂಶ, ಬೆಳವಣಿಗೆ ನಿಯಂತ್ರಕಗಳ ಬಳಕೆ, ಕಳೆ, ಕೀಟ ಮತ್ತು ರೋಗ, ನೀರಾವರಿ ಅನುಕೂಲಗಳು ಹಾಗೂ ನಿರ್ವಹಣಾ ಕ್ರಮಗಳ ಕುರಿತು ಸಮಗ್ರವಾಗಿ ವಿವರಿಸಿದರು.

ಪ್ರತಿ ಎಕರೆಗೆ ಹೆಚ್ಚಿನ ಉತ್ಪಾದನೆ, ಭೂಮಿ, ನೀರು ಹಾಗೂ ಪೋಷಕಾಂಶಗಳ ಸಮರ್ಪಕ ಬಳಕೆ, ಕಳೆಗಳ ಬೆಳವಣಿಗೆ ಕಡಿಮೆಯಾಗುವುದು, ಹೂವು ಹಾಗೂ ಗೊಂಚಲುಗಳ ಸಮಾನ ಬೆಳವಣಿಗೆ, ಕೀಟಗಳ ಹಾನಿ ಕಡಿಮೆಯಾಗುವುದು, ಯಾಂತ್ರೀಕೃತ ಕೃಷಿಗೆ ಅನುಕೂಲ, ಕಡಿಮೆ ಅವಧಿಯಲ್ಲಿ ಬೆಳೆ ಪಕ್ವವಾಗುವುದು, ರೈತರ ಆದಾಯದಲ್ಲಿ ಹೆಚ್ಚಿಸಿಕೊಳ್ಳುವ ಸಲಹೆ ನೀಡಿದರು.

ಮಣ್ಣಿನ ಪರೀಕ್ಷೆ ಆಧರಿಸಿ ರಸಗೊಬ್ಬರ ಬಳಕೆ, ಸಾವಯವ ಗೊಬ್ಬರ ಬಳಕೆಗೆ ಆದ್ಯತೆ, ಸಾರಜನಕ ಗೊಬ್ಬರವನ್ನು ಹಂತ ಹಂತವಾಗಿ ನೀಡುವುದು, ಸತು ಮತ್ತು ಬೋರಾನ್ ಕೊರತೆ ಕಂಡುಬಂದಲ್ಲಿ ಸೂಕ್ತ ಪ್ರಮಾಣದಲ್ಲಿ ನೀಡುವುದು, ಹತ್ತಿ ಬೆಳೆಯಲ್ಲಿ ಅಧಿಕ ಸಸ್ಯವೃದ್ಧಿಯನ್ನು ನಿಯಂತ್ರಿಸಲು ಮೆಪಿಕ್ವಾಟ್ ಕ್ಲೋರೈಡ್ ಬಳಕೆಯ ಮಹತ್ವವನ್ನು ತಿಳಿಸಿ ರೈತರೊಂದಿಗೆ ಸಂವಾದ ನಡೆಸಿದರು.


ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿ ಅವರು "ಕ್ಷೇತ್ರ ಬಚಾವೋ " ಕಾರ್ಯಕ್ರಮದ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದರು.

ಕೃಷಿ ಅಧಿಕಾರಿಗಳು, ವಿವಿಧ ಗ್ರಾಮದ ರೈತರು ಭಾಗವಹಿಸಿದರು.