ಸಾರಾಂಶ
ಮಳೆಗಾಲದಲ್ಲಿ ತೀವ್ರ ಮಳೆಯಾಗುತ್ತಿದ್ದಂತೆ ಈ ನೆಲ್ಲಿಕಾಯಿ ಗಾತ್ರದ ಹುಳಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ರಾತ್ರಿ ಹೊತ್ತಿನಲ್ಲಿ ಇವುಗಳ ಸಂಚಾರ ಹೆಚ್ಚಾಗಿರುತ್ತದೆ.
ಕನ್ನಡಪ್ರಭ ವಾರ್ತೆ ಪರ್ಕಳ
ಇಲ್ಲಿನ ದೇವಿನಗರದ ಸುತ್ತಮುತ್ತ ಪರಿಸರದಲ್ಲಿ ಮತ್ತೆ ಆಫ್ರಿಕನ್ ಬಸವನ ಹುಳುಗಳು ಯಥೇಚ್ಛವಾಗಿ ಕಾಣಿಸಿಕೊಂಡಿವೆ. ಇವುಗಳಿಂದ ಕಿರಿಕಿರಿಗೊಳಗಾದ ಸ್ಥಳೀಯರು ಅವುಗಳ ನಿಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ನಗರಸಭೆಗೆ ಒತ್ತಾಯಿಸಿದ್ದಾರೆ.ಕಳೆದೆರಡು ವರ್ಷಗಳಿಂದ ಈ ಶಂಕದ ಹುಳುಗಳು ಅಥವಾ ಬಸವನ ಹುಳುಗಳು ಈ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಮಳೆಗಾಲದಲ್ಲಿ ತೀವ್ರ ಮಳೆಯಾಗುತ್ತಿದ್ದಂತೆ ಈ ನೆಲ್ಲಿಕಾಯಿ ಗಾತ್ರದ ಹುಳಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ.
ರಾತ್ರಿ ಹೊತ್ತಿನಲ್ಲಿ ಇವುಗಳ ಸಂಚಾರ ಹೆಚ್ಚಾಗಿರುತ್ತದೆ. ಪಪ್ಪಾಯಿ ಗಿಡ ಮತ್ತು ಇನ್ನಿತರ ಹೂವಿನ ಗಿಡ, ಕ್ರೋಟನ್ ಗಿಡಗಳ ಎಲೆಗಳನ್ನು ತಿಂದು ಹಾಳು ಮಾಡುತ್ತವೆ. ಅಲ್ಲದೇ ಇವುಗಳಿಂದ ವಿಚಿತ್ರ ಬಗೆಯ ದುರ್ವಾಸನೆ ಕೂಡ ಹೊರಹೊಮ್ಮುತ್ತಿರುತ್ತದೆ, ಜೊತೆಗೆ ಅವುಗಳ ಮೈಗೆ ಅಂಟಿಕೊಂಡಿರುವ ಲೊಳೆ ಅವುಗಳು ಹೊದಲ್ಲೆಲ್ಲಾ ಅಂಟಿಕೊಳ್ಳುತ್ತವೆ.ಮುಖ್ಯವಾಗಿ ಕಾಂಪೌಂಡ್ ಗೋಡೆಗಳ ಮೇಲೆ ಕಾಣಿಸಿಕೊಳ್ಳುವ ಇವು ಕೆಲವೊಮ್ಮೆ ಮನೆಯೊಳಗೂ ಬಂದು ಅವುಗಳ ಲೊಳೆಯಿಂದ ಕಿರಿಕಿರಿಗೆ ಕಾರಣವಾಗುತ್ತವೆ ಎಂದು ಸ್ಥಳೀಯರಾದ ರಾಜೇಶ್ ಪ್ರಭು ತಿಳಿಸಿದ್ದಾರೆ.
ಮಳೆ ಕಡಿಮೆಯಾಗಿ ಬಿಸಿಲು ಬಿದ್ದರೆ ಈ ಹುಳಗಳು ಮರೆಯಾಗುತ್ತವೆ. ಮಳೆಗಾಲ ಮುಗಿಯುತ್ತಿದ್ದಂತೆ ಅವುಗಳು ಮಾಯವಾಗುತ್ತವೆ. ಕೃಷಿ ಇಲಾಖೆಯ ತಜ್ಞರು ಅವುಗಳನ್ನು ಆಫ್ರಿಕನ್ ಬಸವನ ಹುಳುಗಳೆಂದು ಗುರುತಿಸಿದ್ದು, ಅವುಗಳ ನಿವಾರಣೆಗೆ ಸದ್ಯಕ್ಕೆ ಯಾವುದೇ ಔಷಧಿಗಳಿಲ್ಲ ಎಂದು ತಿಳಿಸಿದ್ದಾರೆ.