ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ತಡೆಯುವ ಸದುದ್ಧೇಶದಿಂದ ಸರ್ಕಾರವು ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ತಡೆಯುವ ಸದುದ್ಧೇಶದಿಂದ ಸರ್ಕಾರವು ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು.ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ರಾಜ್ಯಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ನೂತನ ಯೋಜನೆ ’ಅಕ್ಕ ಪಡೆ’ ಗಸ್ತು ವಾಹನಕ್ಕೆ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಕಿರುಕುಳ, ಅತ್ಯಾಚಾರ, ಮಾನವ ಕಳ್ಳಸಾಗಣೆ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳದಂತಹ ದೌರ್ಜನ್ಯಗಳನ್ನು ತಡೆಯಲು ಅಕ್ಕ ಪಡೆ ಗಸ್ತು ವಾಹನವು ನೆರವಾಗಲಿದೆ ಎಂದರು.ಇಂದಿನ ಆಧುನಿಕ, ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು, ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆದು ಕಾನೂನು ಅರಿವು ಮೂಡಿಸಿ ಸಂಕಷ್ಟದಲ್ಲಿರುವವರಿಗೆ ತಕ್ಷಣವೇ ರಕ್ಷಣೆ ಮತ್ತು ನೆರವು ನೀಡಲು ಅಕ್ಕ ಪಡೆ ಜಿಲ್ಲೆಯಲ್ಲಿ ಇಂದಿನಿಂದ ಕಾರ್ಯಾಚರಣೆ ಆರಂಭಿಸಲಿದೆ. ವಾಹನದಲ್ಲಿ ಮಹಿಳಾ ಪೊಲೀಸ್ ಇರಲಿದ್ದು, ಗೃಹರಕ್ಷಕ ದಳ ಸಿಬ್ಬಂದಿ ಪೊಲೀಸರಿಗೆ ನೆರವು ನೀಡಲಿದ್ದಾರೆ. ಗಸ್ತು ವಾಹನವು ಪ್ರತಿದಿನ ಶಾಲಾ ಕಾಲೇಜು, ಬಸ್, ರೈಲು ನಿಲ್ದಾಣ, ಬಾಲಕಿಯರ ವಿದ್ಯಾರ್ಥಿನಿಲಯ, ಮಾರುಕಟ್ಟೆ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಯಲು ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಅಕ್ಕ ಪಡೆಯು ಶಾಲಾ ಕಾಲೇಜುಗಳಲ್ಲಿ ದೌರ್ಜನ್ಯಗಳ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಫೋಕ್ಸೋ ಹಾಗೂ ಸೈಬರ್ ಅಪರಾಧ ಮತ್ತು ಮಾದಕ ವಸ್ತುಗಳ ಸೇವನೆ ಕುರಿತ ದುಷ್ಪರಿಣಾಮಗಳ ಬಗ್ಗೆ ಮಹಿಳೆಯರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಿ ಧೈರ್ಯ ತುಂಬಲಿದೆ. ವಾರದಲ್ಲಿ ಒಂದು ದಿನ ಜಿಲ್ಲೆಯ ಇತರೆ ತಾಲೂಕುಗಳ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನವು ಅಲ್ಲಿನ ಜನಸಂದಣಿ ಪ್ರದೇಶಗಳಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಿದೆ ಎಂದು ತಿಳಿಸಿದರು.ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಚ್.ಆರ್. ಸುರೇಶ್, ಡಿ.ವೈ.ಎಸ್.ಪಿ. ಸ್ನೇಹರಾಜ್, ಧರ್ಮೇಂದ್ರ, ಪೊಲೀಸ್ ಅಧಿಕಾರಿಗಳು ಇದ್ದರು.