ಮಹಿಳೆಯರ ಬದುಕಿಗೆ ಆದರ್ಶವಾದ ಅಕ್ಕಮಹಾದೇವಿ

| Published : May 01 2024, 01:18 AM IST

ಸಾರಾಂಶ

ಅಕ್ಕಮಹಾದೇವಿ ಮಹಿಳೆಯರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಸಿಗಬೇಕೆಂದು ವಚನಗಳ ಮೂಲಕ ಹೋರಾಟ ಮಾಡಿದ್ದಾರೆ. ಅವರ ಆದರ್ಶಗಳು ಮಹಿಳೆಯರಿಗೆ ಮಾದರಿಯಾಗಿವೆ ಎಂದು ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಅಕ್ಕಮಹಾದೇವಿ ಮಹಿಳೆಯರಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಸಿಗಬೇಕೆಂದು ವಚನಗಳ ಮೂಲಕ ಹೋರಾಟ ಮಾಡಿದ್ದಾರೆ. ಅವರ ಆದರ್ಶಗಳು ಮಹಿಳೆಯರಿಗೆ ಮಾದರಿಯಾಗಿವೆ ಎಂದು ಶರಣ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಹೇಳಿದರು.. ನಗರದ ಜಯದೇವ ಹಾಸ್ಟೆಲ್‌ನಲ್ಲಿ ಅಕ್ಕಮಹಾದೇವಿ ಸಮಾಜದಿಂದ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಹತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. 12ನೇ ಶತಮಾನದಿಂದಲೇ ಅಕ್ಕಮಹಾದೇವಿ ಸೇರಿದಂತೆ ಅನೇಕ ಶಿವ ಶರಣೆಯರು ಸ್ತ್ರೀ ಸಮಾನತೆಗಾಗಿ ಹೋರಾಟ ಮಾಡಿದ್ದರು ಎಂದರು.

ಬಸವಣ್ಣ ಲಿಂಗ ಸಮಾನತೆಯನ್ನು ನಿಜವಾದ ಅರ್ಥದಲ್ಲಿ ಜಾರಿಗೊಳಿಸಿದ್ದರು. ಅಕ್ಕಮಹಾದೇವಿ ಮಹಿಳೆಯರ ಬದುಕಿಗೆ ಆದರ್ಶವಾಗಿದ್ದರು. ಮಹಿಳೆಯರು ಅಕ್ಕಮಹಾದೇವಿಯಂತೆ ಧೈರ್ಯ, ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಸಮಾಜದಲ್ಲಿ ಮತ್ತಷ್ಟು ಸಬಲರಾಗುವ ಮೂಲಕ ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಮಂಜಪ್ಪ ಮಾತನಾಡಿ, ಅಕ್ಕಮಹಾದೇವಿ ವಚನಗಳು ಮಹಿಳೆಯರಿಗೆ ಮಾರ್ಗದರ್ಶಕವಾಗಿವೆ. ಸಮಾಜದಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಜೀವನ ನಡೆಸಬೇಕು ಎನ್ನುವ ಜೀವನಾದರ್ಶಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಆದರೆ ಸ್ತ್ರೀಗೆ ಇಂದಿನ ಸಮಾಜದಲ್ಲಿ ರಕ್ಷಣೆ ಇದೆಯೇ. ಹನ್ನೆರಡನೇ ಶತಮಾನದ ವಚನಗಳು ಸಮಾಜದಲ್ಲಿ ಪರಿಣಾಮ ಬೀರುತ್ತಿಲ್ಲವೆ ಎಂಬ ಪ್ರಶ್ನೆ ಕಾಡುತ್ತಿದೆ. ಸಮಾಜದಲ್ಲಾಗುತ್ತಿರುವ ಬದಲಾವಣೆ, ಮಹಿಳೆಯರ ಮೇಲಿನ ದಬ್ಬಾಳಿಕೆಗಳು ಇನ್ನೂ ನಿಲ್ಲುತ್ತಿಲ್ಲ ಎಂದರು.ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಮಹಿಳೆಯರು ಅಕ್ಕಮಹಾದೇವಿ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಸಮಾಜ ಹಾಗೂ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಯಂತಿ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಮಾಜದ ಮಹಿಳೆಯರು ಬಸವಣ್ಣ, ಅಕ್ಕಮಹಾದೇವಿ ವಚನಗಳನ್ನು ಪ್ರಸ್ತತ ಪಡಿಸಿದರು. ಅಕ್ಕಮಹಾದೇವಿ ವೇಷಭೂಷಣ ತೊಟ್ಟಿದ್ದ ಪುಟಾಣಿ ಗೌರಿ ಎಲ್ಲರನ್ನು ಆಕರ್ಷಿಸಿದಳು. ಸಮಾಜದ ಖಜಾಂಚಿ ಮುಕ್ತಾತಿಪ್ಪೇಶ್, ಕಾರ್ಯದರ್ಶಿ ವೇದ ಸುರೆಶ್, ಪದಾಧಿಕಾರಿಗಳಾದ ಸುಮಪ್ರಭು, ಶೋಭಾ, ಗೀತಾ, ಹೇಮಾ, ರೇಣುಕ ಪ್ರಕಾಶ್, ಮಮತ ರಾಜ್ ಭಾಗವಹಿಸಿದ್ದರು.