ಬಿಜೆಪಿಗೆ ವಿಷನ್ ಚಿಂತೆ; ವಿಪಕ್ಷಗಳಿಗೆ ಕಮಿಷನ್ ಚಿಂತೆ: ಜೆ.ಪಿ.ನಡ್ಡಾ ಆರೋಪ

| Published : May 01 2024, 01:18 AM IST

ಬಿಜೆಪಿಗೆ ವಿಷನ್ ಚಿಂತೆ; ವಿಪಕ್ಷಗಳಿಗೆ ಕಮಿಷನ್ ಚಿಂತೆ: ಜೆ.ಪಿ.ನಡ್ಡಾ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಕನ್ವೆನ್‌ಷನ್ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ವೃತ್ತಿಪರರ ಸಮಾವೇಶವನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಇಡೀ ದೇಶವನ್ನು ಅಖಂಡ ಭಾರತವಾಗಿ ನಿರ್ಮಿಸುತ್ತಿದೆ. ಆದರೆ, ಇಂಡಿಯಾ ಒಕ್ಕೂಟ ದೇಶವನ್ನು ಇಬ್ಬಾಗ ಮಾಡುತ್ತಿದೆ. ತೆರಿಗೆ ವಿಷಯದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ಇಬ್ಬಗೆ ನೀತಿ ಅನುಸರಿಸುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ನಗರದ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಕನ್ವೆನ್‌ಷನ್ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ವೃತ್ತಿಪರರ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಮತ್ತು ಮೈತ್ರಿ ಪಕ್ಷದ ಕೂಟಗಳಿಗೆ ದೇಶದ ಬಗ್ಗೆ ದೂರದೃಷ್ಟಿ ಚಿಂತೆ ಹಾಗೂ ಚಿಂತನೆ ಇದೆ. ಆದರೆ, ವಿರೋಧ ಪಕ್ಷಗಳಿಗೆ ಇದ್ಯಾವುದೂ ಇಲ್ಲ. ಅವರಿಗೆ ಕೇವಲ ಕಮಿಷನ್ ಚಿಂತೆ ಎಂದರು.ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯೋತ್ಸವದ ಭಾಷಣದ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಕವಿತೆ ಸಾಲು ಉಲ್ಲೇಖ ಮಾಡಿದರು. ಇದು ಭಾರತದ ಏಕತೆ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳ ಈಚೆಗೆ ರಾಷ್ಟ್ರವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ತಂದಿದ್ದಾರೆ ಎಂದರು.

ಉಜ್ವಲ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ತಾಯಂದಿರು ಗ್ಯಾಸ್ ಸಂಪರ್ಕ ಪಡೆಯುವ ಮೂಲಕ ಉತ್ತಮ ಜೀವನ ಮಾಡುತ್ತಿದ್ದಾರೆ. 12 ಕೋಟಿ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಮಹಿಳೆಯರು ಗೌರವಯುತವಾದ ಜೀವನ ನಿರ್ವಹಿಸುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

20 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ 5 ಲಕ್ಷ ರು.ಗಳ ಆರೋಗ್ಯ ವಿಮಾ ಸೌಲಭ್ಯವನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಇದರೊಂದಿಗೆ ರಿಕ್ಷಾ ಚಾಲಕ , ಟ್ರಕ್, ಬಸ್, ಚಾಲಕ ಹಾಗೂ ಕ್ಲೀನರ್ ಜಟ್ಕಾವಾಲಾ ಹೀಗೆ ಸಮಾಜದ ವಿವಿಧ ಹಂತಗಳಲ್ಲಿ ದುಡಿಯುತ್ತಿರುವ ಅನೇಕ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಮುದಾಯಕ್ಕೆ ಆರೋಗ್ಯ ಭದ್ರತೆ ನೀಡಿದ್ದಾರೆ ಎಂದರು.

ಸಮಾವೇಶದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್‌.ಎನ್‌.ಚನ್ನಬಸಪ್ಪ, ಶಾರದಾ ಪೂರ‍್ಯನಾಯ್ಕ್, ಮಾಜಿ ಶಾಸಕರಾದ ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ, ಕೆ.ಬಿ.ಅಶೋಕ್ ನಾಯ್ಕ್, ವಿಧಾನ ಪರಿಷತ್‌ ಸದಸ್ಯರಾದ ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಡಾ. ರಾಜನಂದಿನಿ , ಕುಮಾರಿ ಮಂಜುಳಾ, ಕೆ.ಜಿ.ಕುಮಾರಸ್ವಾಮಿ ಮತ್ತಿತರರು ಇದ್ದರು.

ಅತ್ಯಂತ ಕ್ರಿಯಾಶೀಲ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಸಂಸತ್ತಿನಲ್ಲಿ ಉತ್ತಮ ಚರ್ಚೆ ಮಾಡುತ್ತಾರೆ. ಅಲ್ಲದೇ ಕ್ಷೇತ್ರಕ್ಕೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾದರಿ ಸಂಸದರಾಗಿ ಹೊರಹೊಮ್ಮಿದ್ದು, ಮತ್ತೊಮ್ಮೆ ಲೋಕಸಭೆಗೆ ಇವರನ್ನು ಆಯ್ಕೆಮಾಡಿ ಕಳುಹಿಸಿಕೊಡಬೇಕು.

-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ರಾಜ್ಯ ಸರ್ಕಾರಿ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ಬರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಎಲ್ಲದಕ್ಕೂ ಕೇಂದ್ರದ ಕಡೆ ಬೆಟ್ಟು ತೋರಿಸುವ ಸಂಸ್ಕೃತಿ ಸರಿಯಲ್ಲ. ಈಗಾಗಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಸಮರ್ಪಕ ರೀತಿಯಲ್ಲಿ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು.

ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.