ಉಡುಪಿ: ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ಆವರಣದಲ್ಲಿ ದಾವಣಗೆರೆಯ ಶ್ರೀ ಭಾರತಾಂಭೆ ಮಹಿಳಾ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಘ ತಯಾರಿಸಿದ ಖಾದಿ ಉಡುಪುಗಳ ಮಾರಾಟ ಮಳಿಗೆಯನ್ನು ಆರಂಭಿಸಲಾಗಿದೆ. ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆ ಅಂಗವಾಗಿ ಈ ಪ್ರದರ್ಶನ ನಡದಿದೆ.

ಬುಧವಾರ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಈ ಮಳಿಗೆಗೆ ಭೇಟಿ ನೀಡಿ, ಉಡುಪುಗಳನ್ನು ವೀಕ್ಷಿಸಿದರು. ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ವಿದ್ಯಾ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಯು. ಆನಂದ ಜತ್ತನ್, ಕಾರ್ಯದರ್ಶಿ ನಿರ್ಮಲಾ ಹಾಗೂ ಮತ್ತಿತರರಿದ್ದರು.

ಜಿಲ್ಲಾ ಅಧ್ಯಕ್ಷರ ಮನವಿ: ಖಾದಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಸರ್ಕಾರಿ ನೌಕರರು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸುವವಂತೆ ರಾಜ್ಯ ಸರ್ಕಾರಿ ನೌಕರರ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಮನವಿ ಮಾಡಿದ್ದರು.ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಅನುಕೂಲವಾಗುವಂತೆ ಅವರ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಅಧಿಕಾರಿ ಅವರೊಂದಿಗೆ ಮಾತನಾಡಿ, ಮಾರಾಟದ ವೇಳೆಯನ್ನು ಬೆಳಗ್ಗೆ 8ರಿಂದ ಸಂಜೆ 5ರ ಬದಲಿಗೆ 7 ಗಂಟೆವರೆಗೆ ವಿಸ್ತರಿಸುವಂತೆ ಮಾಡಿದ್ದರು. ಇದರಿಂದ ನೂರಾರು ಮಂದಿ ಸರ್ಕಾರಿ ನೌಕರರು ಸಂಜೆ ಕೆಲಸದ ವೇಳೆ ನಂತರ ಈ ಮಳಿಗೆಗೆ ಭೇಟಿ ಖಾದಿ ಬಟ್ಟೆಗಳ‍ನ್ನು ಖರೀದಿಸಿದರು.