ಮಹದಾಯಿ ವಿಷಯವಾಗಿ ಶೀಘ್ರವೇ ಸರ್ವ ಪಕ್ಷ ನಿಯೋಗ: ಸಚಿವ ಪಾಟೀಲ

| Published : Sep 07 2024, 01:32 AM IST

ಸಾರಾಂಶ

ಮಹದಾಯಿ ವಿಷಯವಾಗಿ ಆಗುತ್ತಿರುವ ಅನಗತ್ಯ ವಿಳಂಬ ಗಮನದಲ್ಲಿಟ್ಟುಕೊಂಡು ಮಹದಾಯಿ ವಿಚಾರವಾಗಿ ಶೀಘ್ರವೇ ಕಾನೂನು ತಜ್ಞರನ್ನು ಸಂಪರ್ಕಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೂಡಾ ಸರ್ಕಾರ ಚಿಂತನೆ ನಡೆಸಿದೆ

ಗದಗ: ಮಹದಾಯಿ ನದಿ ವಿಷಯವಾಗಿ ಪ್ರಧಾನಿ ಬಳಿಗೆ ಸರ್ವ ಪಕ್ಷದ ನಿಯೋಗ ತೆಗೆದುಕೊಂಡು ಹೋಗಲು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ವನ್ಯಜೀವಿ ಮಂಡಳಿಯಿಂದ ಅಡೆತಡೆ ಉಂಟು‌ ಮಾಡುತ್ತಿದೆ. ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸರ್ವಪಕ್ಷಗಳ ಸಭೆ ಕರೆದು ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ.

ಮಹದಾಯಿ ವಿಷಯವಾಗಿ ಆಗುತ್ತಿರುವ ಅನಗತ್ಯ ವಿಳಂಬ ಗಮನದಲ್ಲಿಟ್ಟುಕೊಂಡು ಮಹದಾಯಿ ವಿಚಾರವಾಗಿ ಶೀಘ್ರವೇ ಕಾನೂನು ತಜ್ಞರನ್ನು ಸಂಪರ್ಕಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೂಡಾ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೂ ಸದ್ಯದಲ್ಲಿಯೇ ಅಂತಿಮ ಸ್ವರೂಪ ನೀಡಲಾಗುವುದು. ರಾಜ್ಯದ ಜನರ ಹಿತ ಕಾಯುವುದು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದ ಅ‍ವರು, ಜೈವಿಕ ತಂತ್ರಜ್ಞಾನದ ಸಲುವಾಗಿ ವಿಶೇಷ ನೀತಿ ಜಾರಿಗೆ ತಂದಿದ್ದು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಆರಂಭಿಸಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ದೋಣಿ ಕೊರೆಯುವ ಕೆಲಸವಾಗುತ್ತಿದೆ ಎನ್ನುವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅವರ ಹೇಳಿಕೆ ಗಮನಿಸಿದ್ದೇನೆ ರಾಜ್ಯಪಾಲರ ವರದಿ ಬರುತ್ತದೆ, ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಸ್ನೇಹಿತರಾಗಿ ಆ ರೀತಿ ಎಚ್ಚರಿಕೆ ಕೊಟ್ಟಿದ್ದರೆ, ಅವುಗಳನ್ನು ಸರಿಪಡಿಸುವ ಕೆಲಸ ಮಾಡಿಕೊಳ್ಳುತ್ತೇವೆ. ಆದರೆ ಅದು ರಾಜಕೀಯ ಟೀಕೆಯಾಗಿದೆ ಎಂದರು.