ಉತಾರೆಯಲ್ಲಿನ ದೋಷ ಸರಿಪಡಿಸಲು ಆಗ್ರಹ

| Published : Sep 07 2024, 01:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಮೀನಿನ ಉತಾರೆಯಲ್ಲಿ ಉಂಟಾಗಿರುವ ದೋಷಗಳನ್ನು ಆಗ್ರಹಿಸಿ ರಾಜ್ಯ ರೈತ ಸಂಘ- ಹಸಿರು ಸೇನೆ ಜಿಲ್ಲಾ ಘಟಕದಿಂದ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ಉತಾರೆಯಲ್ಲಿ ಅನೇಕ ಅಂಶಗಳು ಸೇರಿ ರೈತರಿಗೆ ತೊಂದರೆಯಾಗುತ್ತಿವೆ. ನೂರಾರು ರೈತರು ಈ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜಮೀನಿನ ಉತಾರೆಯಲ್ಲಿ ಉಂಟಾಗಿರುವ ದೋಷಗಳನ್ನು ಆಗ್ರಹಿಸಿ ರಾಜ್ಯ ರೈತ ಸಂಘ- ಹಸಿರು ಸೇನೆ ಜಿಲ್ಲಾ ಘಟಕದಿಂದ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ಉತಾರೆಯಲ್ಲಿ ಅನೇಕ ಅಂಶಗಳು ಸೇರಿ ರೈತರಿಗೆ ತೊಂದರೆಯಾಗುತ್ತಿವೆ. ನೂರಾರು ರೈತರು ಈ ಸಮಸ್ಯೆಯನ್ನು ಎದುರಿಸುವಂತಾಗಿದೆ. ನಾಗಠಾಣ ಸಮೀಪದ ಗುಗದಡ್ಡಿ ಗ್ರಾಮದ ರೈತ ಮಹಿಳೆ ಕಲ್ಲವ್ವ ಬಸಪ್ಪ ವಾಘೆ ಸರ್ವೇ ನಂಬರ್‌ -೩೩ರಲ್ಲಿ ಜಮೀನನಲ್ಲಿ ಕಳೆದ ೧೦-೧೨ ವರ್ಷಗಳಿಂದ ವಾಸವಿದ್ದು, ಜಮೀನಿನ ಉಳುಮೆ ಮಾಡುತ್ತಿದ್ದಾರೆ. ಆದರೆ ಇವರಿಗೆ ಸೇರಿದ ಜಮೀನು ಉತಾರೆಯಲ್ಲಿ ಡಮ್ಮಿ(ಪೋಕಳಾ ಪಾಣಿ) ಬಂದು ಸೇರಿರುವುದರಿಂದ ಸಮಸ್ಯೆಯಾಗುತ್ತಿದೆ. ಇದು ಕೇವಲ ಒಬ್ಬ ರೈತರ ಸಮಸ್ಯೆಯಲ್ಲ, ಅನೇಕ ರೈತರಿಗೆ ಈ ರೀತಿಯ ತೊಂದರೆ ಎದುರಾಗಿದೆ. ಹೊಲ ಮಾರಾಟ, ಸಾಲ ಮೊದಲಾದವುಗಳ ಪ್ರಕ್ರಿಯೆಗೆ ತೊಂದರೆಯಾಗುತ್ತಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರು ಅಧಿಕಾರಿಗಳ ತಪ್ಪಿಗೆ ತಾವು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಗದ ಪತ್ರಗಳನ್ನು ಪರಿಶೀಲಿಸಿ ನೈಜ ಹಕ್ಕುದಾರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಲಾಯಪ್ಪ ವಾಘೆ, ಶಂಕರ ಬಸಪ್ಪ ವಾಘೆ, ರೈತ ಸಂಘದ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಸಂಗಪ್ಪ ಚಲವಾದಿ, ಆಹೇರಿ ಗ್ರಾಮ ಘಟಕದ ಆಧ್ಯಕ್ಷ ಆತ್ಮಾನಂದ ಭೈರೋಡಗಿ, ಪರಶುರಾಮ ದೇವೂರ ಮುಂತಾದವರು ಇದ್ದರು.