ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ಜಗಳೂರು ವಿಧಾನಸಭಾ ಕ್ಷೇತ್ರದ ಎಲ್ಲ ಸಾರ್ವಜನಿಕರು, ಪೋಷಕರೇ.. ಕೈಮುಗಿದು ಕೇಳಿಕೊಳ್ಳುವೆ. ನಿಮ್ಮ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಿ. ಕಳೆದುಹೋದ ಜೀವ ಮತ್ತೆ ಹುಟ್ಟಿ ಬರುವುದಿಲ್ಲ. 50 ವರ್ಷಗಳ ಇತಿಹಾಸದಲ್ಲೇ 57 ಕೆರೆಗಳ ಯೋಜನೆಯಡಿ ಹಾಗೂ ಪ್ರಕೃತಿ ಕೃಪೆಯಿಂದ ತಾಲೂಕಿನ ಎಲ್ಲ ಕೆರೆ-ಕಟ್ಟೆಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಆದ್ದರಿಂದ ಯಾರೊಬ್ಬರೂ ಕೆರೆ- ಕಟ್ಟೆಗಳಿಗೆ ಇಳಿಯಬಾರದು ಎಂದು ಶಾಸಕ ಬಿ.ದೇವೆಂದ್ರಪ್ಪ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಿರೇಮಲ್ಲನಹೊಳೆ ಗ್ರಾಮದಲ್ಲಿ 2 ವರ್ಷದ ಮಗು ಸೇರಿದಂತೆ ತಾಲೂಕಿನಲ್ಲಿ ವಿವಿಧೆಡೆ ನಾಲ್ಕೈದು ಜನರು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳ ಹಿನ್ನೆಲೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ನಾಮಫಲಕ ಅಳವಡಿಕೆ:ಜಲ ಸಂಭ್ರಮಾಚರಣೆ ಒಂದು ಕಡೆಯಾದರೆ, 2 ವರ್ಷದ ಮಗು ಸೇರಿದಂತೆ ನೀರಿನಲ್ಲಿ ಮುಳುಗಿ ನಾಲ್ಕೈದು ಜನರು ಸಾವನ್ನಪಿರುವ ಘಟನೆಗಳು ನೋವಿನ ಸಂಗತಿಯಾಗಿವೆ. ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಸೇರಿದ ಎಲ್ಲ ಕೆರೆಗಳು, ಗೋಕಟ್ಟೆಗಳು, ಹಳ್ಳಗಳಾಗಿರಲಿ, ಕೃಷಿ ಹೊಂಡಗಳಿಗಾಗಲಿ ಇವುಗಳ ಬಳಿ ಪ್ರವೇಶ ನಿಷೇಧ ಮುಖ್ಯವಾಗಿದೆ. ಎಲ್ಲ ಕಡೆ ಕೆರೆಗಳಿಗೆ ನಾಮಫಲಕಗಳನ್ನು ಹಾಕಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪೋಷಕರು ಮಕ್ಕಳನ್ನು ಕೆರೆ- ಕಟ್ಟೆಗಳಿಗೆ ಹೋಗದಂತೆ ಮನೆಯಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಕರು ಶಾಲೆ ಮುಗಿದ ನಂತರ ನೇರವಾಗಿ ಮನೆಗೆ ಹೋಗುವಂತೆ ಮಕ್ಕಳಿಗೆ ಎಚ್ಚರಿಕೆ ನೀಡಿ ಕಳಿಸಬೇಕು. ನಾವು ಸಹ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಪಂ ಪಿಡಿಒಗಳು, ಸಿಬ್ಬಂದಿಯಿಂದ ಟಾಂ ಟಾಂ ಹೊಡೆಸುವ ಮೂಲಕ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರ ಸಂಪೂರ್ಣ ಸಹಕಾರ ದೊರೆಯುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.₹5 ಲಕ್ಷ ವಿತರಣೆ:
ಹಿರೇಮಲ್ಲನಹೊಳೆ ಗ್ರಾಮದಲ್ಲಿ ನೀರಿನಲ್ಲಿ ಬಿದ್ದು ಮೃತಪಟ್ಟ 2 ವರ್ಷದ ಮಗುವಿನ ಪೋಷಕರರಿಗೆ ಜಿಲ್ಲಾಡಳಿತ ವತಿಯಿಂದ ₹5 ಲಕ್ಷಗಳ ಪರಿಹಾರ ನೀಡಲಾಗಿದೆ. ಪುಟಾಣಿ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ. ತಂದೆ-ತಾಯಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಶಾಸಕರು ಪ್ರಾರ್ಥಿಸಿದರು.ಕಾಲಮಿತಿಯಲ್ಲಿ ಮನೆ ನಿರ್ಮಾಣ:
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ ಹಿರೇಮಲ್ಲನಹೊಳೆ ಕೆರೆ ನೀರು ಹರಿದು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಗ್ರಾಮದ ಹೊರವಲಯದ ಗೋಮಾಳದಲ್ಲಿ 2 ಹೆಕ್ಟೇರ್ ಜಮೀನು ಗುರುತಿಸಿ ನಿವೇಶನ ಜೊತೆಗೆ ಕಾಲಮಿತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುತ್ತೇವೆ. ಉದ್ದಗಟ್ಟದ ನಿರಾಶ್ರಿತರಿಗೆ ಜಾಗ ಕಲ್ಪಿಸಲು ಸೂಚಿಸಲಾಗಿದೆ. ಇಲಾಖೆಯಲ್ಲಿ ಸಾಕಷ್ಟು ಹಣವಿದೆ. ರೈತರ ಜಮೀನುಗಳಲ್ಲಿ ಮೆಕ್ಕೇಜೋಳ, ರಾಗಿ, ಅಡಕೆ ಸೇರಿದಂತೆ ಬೆಳೆಗಳಲ್ಲಿ ನೀರು ನಿಂತು ನಷ್ಟವಾಗಿವೆ. ಇಲಾಖೆ ಸಿಬ್ಬಂದಿ ಸ್ಥಳ ಮಹಜರು ಸಮೀಕ್ಷೆ ಮಾಡುತ್ತಿದ್ದಾರೆ. ವರದಿ ನೀಡಿದ ನಂತರ ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟ ಪಡಿಸಿದರು.ಅಂಗನವಾಡಿ, ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೂ ತುರ್ತಾಗಿ ಹಣ ಬಿಡುಗಡೆ ಮಾಡಲಾಗುವುದು. ಅಂತಹ ಶಾಲೆಗಳ ಮಾಹಿತಿ ನೀಡುವಂತೆ ಬಿಇಒ ಹಾಗೂ ಸಿಡಿಪಿಒಗಳಿಗೆ ಸೂಚಿಸಿದರು. ಸುಳ್ಳು ವರದಿ ನೀಡಿದರೇ ಅಂಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಎನ್‌ಆರ್‌ಇಜಿ ಯೋಜನೆಯಡಿ ಕೆರೆ ಏರಿ ಸ್ವಚ್ಛತೆ, ಜಂಗಲ್ ಕಟ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಎಲ್ಲ ಪಿಡಿಒಗಳಿಗೆ ಸೂಚನೆ ನೀಡಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ಲೋಕೇಶ್ , ತಹಶಿಲ್ದಾರ್ ಸಯ್ಯದ್ ಕಲೀಂ ಉಲ್ಲಾ, ತಾ.ಪಂ.ಇ.ಒ ಕೆಂಚಪ್ಪ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮ್ಮದ್, ಮಹಮ್ಮದ್ ಗೌಸ್, ಆರ್.ಐ.ಧನಂಜಯ್ಯ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅರವಿಂದ್ , ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))