ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಅನುಭವ ಮಂಟಪದ ಪೀಠಾಧ್ಯಕ್ಷ ಹಾಗೂ ಇತಿಹಾಸ ಪ್ರಸಿದ್ದಿ ಪಡೆದ ಬಳ್ಳಿಗಾವಿಯ ಅಲ್ಲಮ ಪ್ರಭು ದೇವರ ಜನ್ಮಸ್ಥಳ ಹಾಗೂ ಅವರ ಗದ್ದಿಗೆ ಅಭಿವೃದ್ಧಿ ಪಡಿಸಲು ನಾವು ಕಂಕಣ ಬದ್ದರಾಗಿದ್ದು, ಈ ಕಾರ್ಯ ಮಾಡುವುದು ನಮ್ಮ ಪೂವರ್ಜನ್ಮದ ಪುಣ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಶಿರಾಳಕೊಪ್ಪ ಬಳಿ ಇರುವ ಬಳ್ಳಿಗಾವಿ ಅಲ್ಲಮ ಪ್ರಭುಗಳು ವಾಸವಿದ್ದ ಸ್ಥಳ ಹಾಗೂ ಅವರ ಗದ್ದುಗೆಗೆ ೧ಕೋಟಿ ರು. ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ತಾಲೂಕು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಸಂಸದ ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಅಭಿವೃದ್ಧಿ ಕಾರ್ಯಕ್ಕೆ ಬಿ.ವೈ. ವಿಜಯೇಂದ್ರ ತಮ್ಮ ಅನುದಾನದಲ್ಲಿ ೧ ಕೋಟಿ ರು. ಕೊಡುವುದಾಗಿ ಘೋಷಿಸಿದ್ದು, ತಾವು ಕೂಡ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದರು.ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಇಲ್ಲಿನ ಅಭಿವೃದ್ಧಿಗೆ ೨ಕೋಟಿ ಹಣ ಬಿಡುಗಡೆ ಆಗಿತ್ತು, ಆದರೆ ಕೇಂದ್ರ ಪುರಾತತ್ವ ಇಲಾಖೆಯ ಹಾಗೂ ಸ್ಥಳೀಯವಾಗಿ ಕೆಲಸಂಗತಿ ತಿಳಿಯದೇ ಬಿಡುಗಡೆ ಆದ ಹಣ ವಾಪಸ್ಸು ಹೋಗಿ ಈ ಕೆಲಸ ಹಿಂದೆ ಬಿದ್ದಿತು. ಈಗ ಏನೇ ಆದರೂ ಈ ಕೆಲಸ ಹಾಗೂ ಇದರ ಸುತ್ತಮುತ್ತಲ ಕೆಲಸವನ್ನು ಮಾಡುತ್ತೇವೆ ಎಂದರು.
ಹಾಗೆಯೇ ಇಲ್ಲಿ ಇರುವ ಪುರಾತನ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆ ಮಾಡಿಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದರು. ಈ ಹಿಂದೆ ಯಡಿಯೂರಪ್ಪನವರು ಈ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನಕೊಟ್ಟು ಸಹಕಾರ ನೀಡಿದ್ದಾರೆ ಎಂದರು.ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಇಂತಹ ಐತಿಹಾಸಿಕ ಸ್ಥಳದ ಅಭಿವೃದ್ಧಿ ಕಾರ್ಯ ಮಾಡುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಇಂದು ಬೆಳಗ್ಗೆ ಈ ಕ್ಷೇತ್ರಕ್ಕೆ ಅನುದಾನ ಕೊಡಬೇಕು ಎಂದು ಸಂಸದ ರಾಘಣ್ಣ ಹೇಳಿದಾಗ ಇತರ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ೧ ಕೋಟಿ ಅನುದಾನ ಕೊಡುವುದಾಗಿ ತಿಳಿಸಿದ್ದೆ, ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಆಯಿತು. ನಮ್ಮ ಶಿಕಾರಿಪುರ ತಾಲೂಕನ್ನು ವಿಜಯನಗರ ಸಾಮ್ರಾಜ್ಯ ಅಭಿವೃದ್ಧಿ ಆದಂತೆ ಅಭಿವೃದ್ಧಿಪಡಿಸಿದರು ಎಂದರು.
ಎಂ.ಎ.ಡಿ.ಬಿ. ಮಾಜಿ ಅಧ್ಯಕ್ಷ ಎ.ಎಸ್.ಪದ್ಮನಾಭ್ ಭಟ್, ಅಲ್ಲಮಪ್ರಭು ಗದ್ದಿಗೆಯ ಸ್ವಾಮಿಗಳಾದ ಇಂದುಶೇಖರ ಶ್ರೀ ಮಾತನಾಡಿದರು.ಶಿರಾಳಕೊಪ್ಪ ವೀರಕ್ತಮಠದ ಸಿದ್ದೇಶ್ವರ ಸ್ವಾಮಿಗಳು ಆಶೀವರ್ಚನ ನೀಡಿ ಈ ಕಾರ್ಯಕ್ಕೆ ೧ ಲಕ್ಷ ರು. ಕೊಡುವುದಾಗಿ ಹೇಳಿದರು.
ಎಂ.ಎ.ಡಿ.ಬಿ.ಮಾಜಿ ಅಧ್ಯಕ್ಷ ಗುರುಮೂರ್ತಿ, ಮಲ್ಲಣ್ಣ, ನಾಗರಾಜ್, ಉಜ್ಜಪ್ಪ, ಅಶೋಕ ಅಗಡಿ, ಕೇಂದ್ರ ಪುರಾತತ್ವ ಇಲಾಖೆಯ ಎಇಇ ಶ್ರೀನಿವಾಸ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.