ಸಾರಾಂಶ
ಗೌಡರು ಸದಾ ಆರೋಗ್ಯವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ
ಈ ನಾಡು ಕಂಡ ಮುತ್ಸದ್ಧಿ ರಾಜಕಾರಣಿ, ನಾಡು, ನುಡಿ, ನೆಲ, ಜಲದ ಮೇಲೆ ಅಪಾರ ಅಭಿಮಾನ ಹೊಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅನಾರೋಗ್ಯ ಕೋಟ್ಯಂತರ ಜನರಲ್ಲಿ ಆತಂಕ ಮೂಡಿಸಿತ್ತು. ಜೀವನದ ಇಚ್ಛಾ ಶಕ್ತಿ , ದೈವ ಕೃಪೆ ಹಾಗೂ ಜನರ ಆಶೀರ್ವಾದ ಎಚ್.ಡಿ.ದೇವೇಗೌಡರ ಆರೋಗ್ಯ ಸುಸ್ಥಿತಿಗೆ ಬರಲು ಸಾಧ್ಯವಾಗಿದ್ದು, ಗೌಡರು ಸದಾ ಆರೋಗ್ಯವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಆಶೀರ್ವದಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಬೃಹತ್ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರಲ್ಲಿ ನಂಜಾವಧೂತ ಶ್ರೀಗಳು ಮನವಿ ಮಾಡಿದರು.ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಒಬಿಸಿ ಮೀಸಲು ನೀಡಿ: ರಾಜ್ಯದಲ್ಲಿರುವ ಒಕ್ಕಲಿಗ ಉಪಜಾತಿ ಕುಂಚಿಟಿಗ ಸಮುದಾಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕವಾಗಿ ಕೇಂದ್ರ ಮೀಸಲಾತಿ ಸೌಲಭ್ಯವಿಲ್ಲದ ಕಾರಣ ಅವಕಾಶ ವಂಚಿತರಾಗುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿಯುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆಯೂ ಕೂಡ ಎಚ್. ಡಿ.ದೇವೇಗೌಡರು ಹಾಗೂ ಎಚ್. ಡಿ. ಕುಮಾರಸ್ವಾಮಿಯವರು ಹೆಚ್ಚು ಕಾಳಜಿ ವಹಿಸಿ ಕುಂಚಿಟಿಗರಿಗೆ ಕೇಂದ್ರದ ಓಬಿಸಿ ಮೀಸಲಾತಿ ಕೊಡಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಎಚ್ಎಂಟಿ ಕಾರ್ಖಾನೆ ಹಾಗೂ ಭದ್ರಾವತಿ ಉಕ್ಕಿನ ಕಾರ್ಖಾನೆಗಳಿಗೆ ಪುನಶ್ಚೇತನ ಕಲ್ಪಿಸಿ, ರಾಜ್ಯದಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವಂತಹ ಸ್ಥಿತಿ ನಿರ್ಮಿಸಿ ನಿರುದ್ಯೋಗ ಸಮಸ್ಯೆ ನಿವಾರಿಸುವಂತೆ ಕೋರಿದರು.
ಶ್ರೀ ನಂಜಾವಧೂತ ಸ್ವಾಮೀಜಿಗಳ ಸಲಹೆ ಸ್ವೀಕರಿಸಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲು ಕಲ್ಪಿಸಲು ನಾವು ಮತ್ತು ನಮ್ಮ ತಂದೆ ಬದ್ಧರಾಗಿದ್ದೇವೆ, ಜೊತೆಗೆ ಕುಂಚಿಟಿಗರಿಗೂ ಸಹ ಕೇಂದ್ರ ಓಬಿಸಿ ಮೀಸಲು ಕಲ್ಪಿಸಲು ಆಸಕ್ತರಾಗಿದ್ದೇವೆ. ಭದ್ರಾವತಿ ಉಕ್ಕಿನ ಕಾರ್ಖಾನೆ ಶೀಘ್ರದಲ್ಲಿ ಪುನಶ್ಚೇತನಗೊಳ್ಳಲಿದ್ದು, ರಾಜ್ಯದ ಹೆಮ್ಮೆಯ ಎಚ್ಎಂಟಿ ಗಡಿಯಾರ ಕಾರ್ಖಾನೆಯನ್ನೂ ಕೂಡ ಮರು ಸ್ಥಾಪನೆ ಮಾಡಲಾಗುವುದು. ಕೇಂದ್ರ ಒಬಿಸಿ ಮೀಸಲು ಸೌಲಭ್ಯ ಬೇಕು ಎಂದು ದೇಶದಲ್ಲಿ ೩೯೬ ಜಾತಿಗಳು ಮನವಿ ಸಲ್ಲಿಸಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆಸಲ್ಲಿಸಿದ್ದಾರೆ. ಕೇಂದ್ರ ಒಪ್ಪಿಗೆ ಸೂಚಿಸಿದರೆ ಕಾಡುಗೊಲ್ಲರಿಗೆ ಎಸ್ ಟಿ ಮೀಸಲಾತಿ, ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ಸೌಲಭ್ಯ ದೊರಕಲಿದೆ ಎಂದರು.