ಕುಷ್ಟಗಿ: ಶಾಲಾ ಆವರಣ ಸ್ವಚ್ಛಗೊಳಿಸುವ ವಿಚಾರವಾಗಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಥಳಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ತಾಲೂಕಿನ ಕೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರ ಬೆಳಗ್ಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಪಾಲಕರು ಶಿಕ್ಷಣ ಇಲಾಖೆಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ ಹಾಗೂ ಇಸಿಒ ಶಿವಾನಂದ ಪಂಪಣ್ಣನವರ ಶಾಲೆಗೆ ಭೇಟಿ ನೀಡಿ ಮಗು, ಪಾಲಕರು ಹಾಗೂ ಶಿಕ್ಷಕಿಯ ವಿಚಾರಣೆ ನಡೆಸಿದರು.

ಘಟನೆ ಆಕಸ್ಮಿಕವಾಗಿ ನಡೆದಿರುವುದಾಗಿ ತಿಳಿಸಿದ ಶಿಕ್ಷಕಿ ಕ್ಷಮೆಯಾಚಿಸಿದ್ದು, ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ.

ಮಕ್ಕಳಿಗೆ ಯಾವುದೇ ಕಾರಣಕ್ಕೂ ದೈಹಿಕ ಅಥವಾ ಮಾನಸಿಕ ಹಿಂಸೆ ನೀಡಬಾರದು. ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು ಹಾಗೂ ಉತ್ತಮ ಶಿಕ್ಷಣ ನೀಡಬೇಕು. ಶಾಲೆಯಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಅಧಿಕಾರಿಗಳು ಶಿಕ್ಷಕಿಗೆ ಬುದ್ಧಿವಾದ ಹೇಳಿದರು.

ಕೇವಲ ತಪ್ಪೊಪ್ಪಿಗೆ ಪತ್ರಕ್ಕೆ ಸೀಮಿತವಾಗದೆ ಶಿಕ್ಷಕಿಯ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದರು. ಘಟನೆ ಕುರಿತು ವರದಿ ಸಿದ್ಧಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.


ಎಸ್‌ಡಿಎಂಸಿ ಅಧ್ಯಕ್ಷ ಪರಸಪ್ಪ, ಸಿಆರ್‌ಪಿ ಈರಣ್ಣ ಕರಡಕಲ್‌, ಮುಖ್ಯಶಿಕ್ಷಕಿ ವಿದ್ಯಾ ಕಂಪಾಪುರಮಠ, ಪಾಲಕರಾದ ಮಂಜೂರು ಇಲಾಹಿ ಬನ್ನು, ಉಸ್ಮಾನ ಅಲಿ ಬನ್ನು, ಜಾವೀದ್ ಕಾಟೇವಾಡಿ ಇದ್ದರು.