ಕ್ಲಸ್ಟರ್‌ ಕಿಚನ್‌ ಯೋಜನೆ ಕೈಬಿಡಲು ಅಕ್ಷರ ದಾಸೋಹ ನೌಕರರ ಸಂಘ ಆಗ್ರಹ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಶಾಲಾ ಮಕ್ಕಳ ಬಿಸಿಯೂಟ ಯೋಜನೆಯನ್ನು ಕ್ಲಸ್ಟರ್ ಕಿಚನ್ (ಕೇಂದ್ರೀಕೃತ ಅಡುಗೆ ಮನೆ) ಮೂಲಕ ಸಿದ್ಧಪಡಿಸುವ ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ‌ ನೇತೃತ್ವದಲ್ಲಿ ಬಿಸಿಯೂಟ ನೌಕರರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

​ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಕ್ಲಸ್ಟರ್ ಕಿಚನ್ ರಚಿಸುವ ಕುರಿತು ಸಾಧಕ​-ಬಾಧಕಗಳ ಅಭಿಪ್ರಾಯ ಕೇಳಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಿಐಟಿಯು ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ ಮಾತನಾಡಿ, ಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಾರಂಭಿಸುವ ಯೋಚನೆಯು ಖಾಸಗಿಯವರ ಪಾಲು ಮಾಡಲು ದಾರಿ ಮಾಡಿಕೊಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಈ ಪದ್ಧತಿಯನ್ನು ಜಾರಿಗೊಳಿಸದೆ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.


ಸಿಐಟಿಯು ಮುಖಂಡ ಆರ್‌.ಎಸ್‌. ಬಸವರಾಜ ಮಾತನಾಡಿ, 1920ರಲ್ಲಿ ಪ್ರಾರಂಭವಾಗಿ, 2001ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾರಿಗೆ ಬಂದಿರುವ ಬಿಸಿಯೂಟ ಯೋಜನೆಯು ಐತಿಹಾಸಿಕ ಮಹತ್ವ ಹೊಂದಿದೆ. ಸರ್ಕಾರಿ ಶಾಲಾ ಮಕ್ಕಳ ಪೌಷ್ಟಿಕಾಂಶ ವೃದ್ಧಿಸಲು ಮತ್ತು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಈ ಯೋಜನೆ ರೂಪಿಸಲಾಗಿದೆ ಎಂದರು.

ಬಿಸಿಯೂಟದ ಮುಖಂಡರಾದ ಕೆ. ನಾಗರತ್ನಮ್ಮ ಮಾತನಾಡಿ, ಬಿಸಿಯೂಟ ನಿರ್ವಹಣೆಯ ಜವಾಬ್ದಾರಿಯನ್ನು ಶಾಲಾ ಶಿಕ್ಷಕರಿಗೆ ವಹಿಸುವುದನ್ನು ಸಂಘವು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಶಿಕ್ಷಕರು ಬೋಧನೆ ಮತ್ತು ಶಾಲಾ ಪಠ್ಯಕ್ರಮಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಬಿಸಿಯೂಟ ತಯಾರಿಸುವುದು ಮತ್ತು ಬಡಿಸುವುದು ಅಡುಗೆ ನೌಕರರ ಮೂಲ ಕೆಲಸವಾಗಿರುವುದರಿಂದ, ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೇ ವಹಿಸಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟದ ಸಂಘಟನೆಯ ಮುಖಂಡರಾದ ಗೌರಮ್ಮ ಮಾತನಾಡಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರಲ್ಲಿ ಎಸ್‌ಎಸ್ಎಲ್‌ಸಿ ಹಾಗೂ ಪದವೀಧರರೂ ಇದ್ದು, ಯೋಜನೆಯನ್ನು ಸಮರ್ಥವಾಗಿ ನಿಭಾಯಿಸುವ ಅರ್ಹತೆ ಮತ್ತು ಅನುಭವ ಹೊಂದಿದ್ದಾರೆ ಎಂದರು.

ಆ​ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಕೆ. ಗೂಳಮ್ಮ, ಸುನಂದಾ, ಅನಿತಾ, ಕವಿತಾ, ನಾಗಮ್ಮ, ರೇಣುಕಾ ಭಾಗವಹಿಸಿದ್ದರು.