ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ತಮ್ಮ ಒಡೆತನದ ಸ್ವರ್ಣಗೌರಿ ಸ್ಟೋನ್ ಕ್ರಷರ್ನ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಮೆಸ್ಕಾಂ ಅಧಿಕಾರಿಗಳು ಪರೋಕ್ಷ ವಾಗಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಭರತ್ ಕೆಂಪರಾಜು ಮಂಗಳವಾರ ಕಡೂರು ಪಟ್ಟಣದ ಮೆಸ್ಕಾಂ ವಿಭಾಗಾಧಿಕಾರಿ ಕಚೇರಿ ಎದುರು ಹಣ ಹಾಗೂ ಚೆಕ್ಗಳನ್ನು ಮುಂದಿಟ್ಟು ಏಕಾಂಗಿಯಾಗಿ ಧರಣಿ ನಡೆಸಿದರು.ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಕ್ತ ಕಾರಣ ನೀಡದ ಅಧಿಕಾರಿಗಳು, ಮರುಸಂಪರ್ಕ ವಿಚಾರದಲ್ಲೂ ಸ್ಪಷ್ಟನೆ ನೀಡುತ್ತಿಲ್ಲ. ಹಣದ ಬೇಡಿಕೆ ಇಟ್ಟಿರುವ ಆರೋಪಕ್ಕೆ ಉತ್ತರ ನೀಡಬೇಕು. ವಿದ್ಯುತ್ ಸಂಪರ್ಕ ಮರುಸ್ಥಾಪಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ನೋಟಿಸ್ನಲ್ಲಿ ಹೆಸರಿಲ್ಲ, ಆದರೂ ವಿದ್ಯುತ್ ಸಂಪರ್ಕ ಕಡಿತ!ತಮ್ಮ ಕ್ರಷರ್ ಪಕ್ಕದಲ್ಲಿರುವ ಪದ್ಮಶ್ರೀ ಸ್ಟೋನ್ ಕ್ರಷರ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ನೋಟಿಸ್ ನೀಡ ಲಾಗಿತ್ತು. ಆದರೆ, ಆ ವರದಿಯಲ್ಲಿ ಸ್ವರ್ಣಗೌರಿ ಸ್ಟೋನ್ ಕ್ರಷರ್ನ ಉಲ್ಲೇಖವಿರಲಿಲ್ಲ. ಆದರೂ ತಮ್ಮ ಕ್ರಷರ್ನ ವಿದ್ಯುತ್ ಪರಿವರ್ತಕದ ಸಂಪರ್ಕ ಕಡಿತಗೊಳಿಸಿರುವುದೇಕೆ ಎಂದು ಪ್ರಶ್ನಿಸಿದಾಗ ಮೆಸ್ಕಾಂ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ನೆಪ ಹೇಳುತ್ತಿದ್ದಾರೆ ಎಂದು ಭರತ್ ಕೆಂಪರಾಜು ಆರೋಪಿಸಿದರು.ಸರ್ವೆ ನಂ. 15ರಲ್ಲಿರುವ ಪದ್ಮಶ್ರೀ ಸ್ಟೋನ್ ಕ್ರಷರ್ನಲ್ಲಿ ನಿಯಮ ಉಲ್ಲಂಘನೆಯಾದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ವರದಿ ಆಧಾರದಲ್ಲಿ ಕೈಗೊಂಡ ಕ್ರಮಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ, ತಮ್ಮ ಕ್ರಷರ್ ವಿರುದ್ಧ ಯಾವ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮೆಸ್ಕಾಂ ಅಧಿಕಾರಿಗಳಿಗೆ ವಿವರವಾದ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಕ್ರಷರ್ನಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟ ಇಲಾಖೆ ಕಾನೂನುಬದ್ಧ ಕ್ರಮ ಕೈಗೊಳ್ಳಲಿ. ಆದರೆ, ವಿದ್ಯುತ್ ಸಂಪರ್ಕ ಕಡಿತದ ಹಿಂದಿನ ಕಾರಣವನ್ನು ಬಹಿರಂಗಪಡಿಸಬೇಕು ಹಾಗೂ ಹಣದ ಬೇಡಿಕೆ ಆರೋಪಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.ವಿದ್ಯುತ್ ಸಂಪರ್ಕ ಸ್ಥಗಿತದಿಂದ ಕ್ರಷರ್ನ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿದಿನ ಆರ್ಥಿಕ ನಷ್ಟವಾಗುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು, ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
-- ಕೋಟ್--
ಏಕಾಂಗಿ ಹೋರಾಟ
ಇದು ತಮ್ಮ ವೈಯಕ್ತಿಕ ವಿಚಾರವಾಗಿರುವುದರಿಂದ ಪಕ್ಷವನ್ನು ಹೋರಾಟಕ್ಕೆ ತಂದಿಲ್ಲ. ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ.- ಭರತ್ ಕೆಂಪರಾಜು, ಉಪಾಧ್ಯಕ್ಷ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕ.