ಚಿಕ್ಕಮಗಳೂರುಆನೆ ಕಾರಿಡಾರ್ ಮರುಜೋಡಣೆಗೆ ಪ್ರಸ್ತಾವನೆ ಸಿದ್ಧಪಡಿಸುವ ಜತೆಗೆ ಅಗತ್ಯವಿರುವ ಖಾಸಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲು, ಪರ್ಯಾಯ ಭೂಮಿ ಅಥವಾ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸ ಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನೂತನ ಅರಣ್ಯ ಸಂಕೀರ್ಣ ಉದ್ಘಾಟನೆ । ಅರಣ್ಯ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆನೆ ಕಾರಿಡಾರ್ ಮರುಜೋಡಣೆಗೆ ಪ್ರಸ್ತಾವನೆ ಸಿದ್ಧಪಡಿಸುವ ಜತೆಗೆ ಅಗತ್ಯವಿರುವ ಖಾಸಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲು, ಪರ್ಯಾಯ ಭೂಮಿ ಅಥವಾ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸ ಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅರಣ್ಯ ಸಂಕೀರ್ಣವನ್ನು ಮಂಗಳವಾರ ಉದ್ಘಾಟಿಸಿ ಅರಣ್ಯ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆನೆ ಕಾರಿಡಾರ್‌ಗಳು ಅಲ್ಲಲ್ಲಿ ಸಂಪರ್ಕ ಕಡಿತಗೊಂಡಿರುವುದರಿಂದ ಆನೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ಜಮೀನು ಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿವೆ. ಹೀಗಾಗಿ, ಕಾರಿಡಾರ್‌ಗಳ ಮರುಜೋಡಣೆಗೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಅಗತ್ಯವಿರುವ ಖಾಸಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಅವರಿಗೆ ಪರ್ಯಾಯ ಭೂಮಿ ಅಥವಾ ಪರಿಹಾರ ನೀಡುವ ಕುರಿತು ಕ್ರಮ ವಹಿಸಲಾಗುವುದು. ಇದರಿಂದ ಆನೆಗಳ ಉಪಟಳ ತಗ್ಗಿಸಲು ಸಾಧ್ಯ ಎಂದು ಹೇಳಿದರು.

ಆನೆ ಟಾಸ್ಕ್ ಫೋರ್ಸ್‌ಗಳ ಸಂಖ್ಯೆ 4ರಿಂದ 8ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಆರ್ಥಿಕ ಇಲಾಖೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಸದನದಲ್ಲಿಯೂ ಪ್ರಸ್ತಾಪಿಸಿದ್ದರು. ಟಾಸ್ಕ್ ಫೋರ್ಸ್ ಸಂಖ್ಯೆ ಹೆಚ್ಚಳವಾದರೆ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿದಾಗ ತ್ವರಿತವಾಗಿ ರಕ್ಷಣಾ ಕಾರ್ಯಾ ಚರಣೆ ಕೈಗೊಳ್ಳಲು ಅನುಕೂಲ. ಟಾಸ್ಕ್‌ ಫೋರ್ಟ್‌ ಸಂಖ್ಯೆ ಹೆಚ್ಚಳದಿಂದ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗೆ ಸಹಕಾರಿಯಾಗಲಿದೆ ಎಂದರು.

3 ತಿಂಗಳಲ್ಲಿ ಜಂಟಿ ಸರ್ವೇ ಪೂರ್ಣ: ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಜಂಟಿಯಾಗಿ ನಡೆಸುತ್ತಿರುವ ಸರ್ವೇ ಕಾರ್ಯ ಶೇ.80ರಷ್ಟು ಪೂರ್ಣಗೊಂಡಿದೆ. ಉಳಿದ ಭಾಗಗಳಲ್ಲಿಯೂ ತ್ವರಿತ ಸರ್ವೇ ನಡೆಸಿ, ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಸಾಫ್ಟ್ ರಿಲೀಸ್ ಸೆಂಟರ್‌ಗೆ ಟೆಂಡರ್ ಪೂರ್ಣ: ತರೀಕೆರೆ ತ್ಯಾಗದಬಾಗಿಲು ಬಳಿ 5000 ಎಕರೆ ಪ್ರದೇಶದಲ್ಲಿ ಆನೆ ಸಾಫ್ಟ್ ರಿಲೀಸ್ ಸೆಂಟರ್ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಹಂತದಲ್ಲಿ ಕಾರ್ಯಾದೇಶ ನೀಡಿ ಕಾಮ ಗಾರಿ ಆರಂಭಿಸಬೇಕಿದೆ ಎಂದು ಹೇಳಿದರು.

ಶಾಸಕರಾದ ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಆರತಿ ಕೃಷ್ಣ, ಎ.ವಿ. ಗಾಯಿತ್ರಿ ಶಾಂತೇಗೌಡ, ಕೆಪೆಕ್ ಅಧ್ಯಕ್ಷ‌ ಬಿ.ಎಚ್.ಹರೀಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷೀರ ಸಾಗರ್ ಇದ್ದರು.

---ಬಾಕ್ಸ್ ---

ಗುಣಮಟ್ಟದ ರೇಡಿಯೋ ಕಾಲರ್ ಅಳವಡಿಕೆಗೆ ಸೂಚನೆ

ಹುಲಿಗಳಿಗೆ ಅಳವಡಿಸುವ ರೇಡಿಯೋ ಕಾಲರ್‌ಗಳ ಬ್ಯಾಟರಿ ಅವಧಿಗೂ ಮುನ್ನವೇ ಹಾಳಾಗುತ್ತಿದ್ದು, ಹುಲಿಗಳ ಚಲನವಲನದ ಮಾಹಿತಿ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಕಾಲರ್‌ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಹಾಗೂ ಗುಣಮಟ್ಟದ ರೇಡಿಯೋ ಕಾಲರ್‌ಗಳನ್ನೇ ಬಳಸಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನೂ ಇತರ ಪ್ರದೇಶಗಳಿಂದ ಹುಲಿ ಮತ್ತು ಚಿರತೆಗಳನ್ನು ತಂದು ಅರಣ್ಯದಲ್ಲಿ ಬಿಡುಗಡೆ ಮಾಡುವಾಗ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನರಿಗೆ ತೊಂದರೆಯಾಗದಂತೆ ಅರಣ್ಯದ ಸೂಕ್ತ ಪ್ರದೇಶದಲ್ಲಿ ಪ್ರಾಣಿಗಳನ್ನು ಬಿಡುಗಡೆ ಮಾಡಬೇಕು, ಸ್ಥಳೀಯ ಗ್ರಾಪಂಗೆ ಮತ್ತು ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

---ಬಾಕ್ಸ್ ---

ಕೇಂದ್ರ ಒಂದು ವರ್ಷ ಕಾಲಾವಕಾಶ ನೀಡಿದರೆ ಕೇರಳ ಮಾದರಿ ಸರ್ವೇ

ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ತಿರಸ್ಕರಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಒಂದು ವರ್ಷ ಕಾಲಾವಕಾಶ ನೀಡಬೇಕು. ಆ ಅವಧಿಯಲ್ಲಿ ಕೇರಳ ಮಾದರಿಯಲ್ಲಿ ಭೌಗೋಳಿಕ ಸರ್ವೇ ನಡೆಸಿ, ಜನವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.