ಕನ್ನಡಪ್ರಭ ವಾರ್ತೆ ವಿಜಯಪುರ

ಜೋಡೆತ್ತಿನ ಕೃಷಿಗೆ ಪ್ರಥಮಾದ್ಯತೆ ನೀಡುವುದು, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹ 11 ಸಾವಿರ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಭಿಯಾನ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಈವರೆಗೂ ಯಾವುದೇ ಮನ್ನಣೆಯನ್ನು ನೀಡಿಲ್ಲ. ಇನ್ನು ಮುಂದೆಯೂ ಸರ್ಕಾರ ಸ್ಪಂದನೆ ಮಾಡದೇ ಹೋದರೆ ಒಂದು ಲಕ್ಷ ಎತ್ತಿನ ಬಂಡಿಗಳ ಸಮ್ಮುಖದಲ್ಲಿ ನವ್ಹೆಂಬರ್‌ 5 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ನಂದಿ ಸೇನೆ ಪ್ರಮುಖ ಬಸವರಾಜ ಬಿರಾದಾರ ಹೇಳಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ತಾಲೂಕು ಮಟ್ಟದಲ್ಲಿ ಬೃಹತ್ ಹೋರಾಟದ ಮೂಲಕ ಎತ್ತಿನ ಬಂಡಿಗಳ ಸಮ್ಮುಖದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗಿದೆ. ಆದರೆ, ಇನ್ನೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಮುಂದೆಯೂ ಎಚ್ಚೆತ್ತುಕೊಳ್ಳದೇ ಹೋದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ನ.5 ರಂದು ಒಂದು ಲಕ್ಷ ಎತ್ತಿನ ಬಂಡಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಪ್ರತಿಭಠನೆ ನಡೆಸುವುದು ನಿಶ್ಚಿತ. ಈ ಕುರಿತು ಈಗಾಗಲೇ ನೂರಾರು ಗ್ರಾಮಗಳ ರೈತರು ತಹಸೀಲ್ದಾರ್‌ರ ಮೂಲಕ ಮುಖ್ಯಮಂತ್ರಿಗಳಿಗೆ ಜ್ಞಾಪನಾ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.ನಂದಿ ಸೇನೆ ಈಗಾಗಲೇ ಬಿಜ್ಜರಗಿಯ ಶ್ರೀ ಸನ್ಯಾಸಪ್ಪನ ಮಠದಲ್ಲಿ 11 ದಿನಗಳ ಕಾಲ ಈ ವಿಷಯವಾಗಿ ಧರಣಿ ಸತ್ಯಾಗ್ರಹದ ಮೂಲಕ ಹೋರಾಟ ನಡೆಸಿದೆ. ಸತತ 3 ವರ್ಷಗಳಿಂದ ಜೋಡೆತ್ತಿನ ಕೃಷಿಕರ ನಂದಿ ಸೇನೆಯ ಬೇಡಿಕೆಗಳ ಈಡೇರಿಕೆಯ ಬಗ್ಗೆ ಸರ್ಕಾರ ಯಾವುದೇ ರೀತಿಯ ಸ್ಪಂದನೆ ನೀಡದಿರುವ ಕಾರಣ ಬಾಗಲಕೋಟ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಹತ್ತಿರ ಹೆದ್ದಾರಿಯನ್ನು ಅಕ್ಟೋಬರ್‌ 30 ರಿಂದ ನಿರಂತರವಾಗಿ ನೂರಾರು ಎತ್ತಿನ ಬಂಡಿಗಳಿಂದ ತಡೆದು ಹೋರಾಟ ನಡೆಸಲಾಗುವುದು. ಇದಕ್ಕೂ ಸರ್ಕಾರ ಸ್ಪಂದಿಸದೇ ಹೋದರೆ ನ.5 ರಂದು ಒಂದು ಲಕ್ಷ ಎತ್ತಿನ ಬಂಡಿಗಳಿಂದ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯುವುದು ನಿಶ್ಚಿತ. ನಂದಿ ಕೃಷಿಯ ಸಂಸ್ಕೃತಿ ಪುನಶ್ಚೇತನಕ್ಕಾಗಿ ರಾಜ್ಯದ ಶೇ.10 ಪ್ರತಿಶತ ಬಜೆಟ್‌ನಲ್ಲಿ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹ 11 ಸಾವಿರ ರೂ‌ಪಾಯಿ ಪ್ರೋತ್ಸಾಹ ಧನವನ್ನು ನೀಡುವ ಯೋಜನೆ ರೂಪಿಸುವುದು, ನಂದಿ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಔಷಧಿಗಳು ಹಾಗೂ ಆಹಾರ ತಯಾರಿಸುವುದಕ್ಕೆ ಪ್ರೊತ್ಸಾಹ ನೀಡುವ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್.ಜಿ.ನಾಡಗೌಡ, ಸಂಗಮೇಶ ಕಾಮನ್ನವರ, ಮಹಾದೇವ ಹಾಲಳ್ಳಿ, ಅಭಿಷೇಕ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.