ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಅ.29 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ.ಕೆಂಗನಾಳ ಹೇಳಿದರು.

ಸುದ್ದಿಗಾರರೊಂದಿಗೆ ವಿಷಯ ತಿಳಿಸಿದ ಅವರು, ನಗರದ ಜಲನಗರದ ಬುದ್ಧ ವಿಹಾರದಿಂದ ನ್ಯಾಯಾಲಯದ ಮಾರ್ಗವಾಗಿ ಮಹಾನಗರ ಪಾಲಿಕೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಅಂದು ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ನಗರದ ಮೂಲಸೌಕರ್ಯ ಅಭಿವೃದ್ಧಿ, ಕಟ್ಟಡ ಪರವಾನಗಿ ಪ್ರಕ್ರಿಯೆಯ ಸರಳೀಕರಣ ಹಾಗೂ ಸಾರ್ವಜನಿಕರ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುವುದು ಪ್ರತಿಭಟನೆಯ ಉದ್ದೇಶವಾಗಿದೆ. ಇ-ಸ್ವತ್ತು ಹಾಗೂ ಆಸ್ತಿ ಪಹಣಿ ದಾಖಲೆಗಳನ್ನು ತ್ವರಿತವಾಗಿ ಒದಗಿಸಬೇಕು. ಕಟ್ಟಡ ನಿರ್ಮಾಣಕ್ಕೆ ಅನುಮತಿ ಹಾಗೂ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರವನ್ನು ಸಕಾಲದಲ್ಲಿ ನೀಡಬೇಕು. ಎಲ್ಲ ಮಾದರಿಯ ವಿದ್ಯುತ್ ಸಂಪರ್ಕಗಳನ್ನು ಒದಗಿಸಲು ಹೆಸ್ಕಾಂಗೆ ಸೂಕ್ತ ಸೂಚನೆ ನೀಡಬೇಕು. ವಿವಿಧ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು. ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಯಲಿರುವ ಪ್ರತಿಭಟನೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ರೈತ ಭಾರತ ಪಕ್ಷದ ವತಿಯಿಂದ ವಿನಂತಿಸಿದರು. ಮಾಹಿತಿಗಾಗಿ ಮೊ.9986399453, 7259402056 ಸಂಪರ್ಕಿಸಲು ಕೋರಿದರು.ಬೇಡಿಕೆಗಳು

ಎನ್.ಎ.ಅನುಮೋದಿತ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.

ಹಗಲಿನಲ್ಲಿಯೂ ಉರಿಯುತ್ತಿರುವ ಬೀದಿದೀಪಗಳ ಸಮಸ್ಯೆ ನಿವಾರಿಸಲು ಕ್ರಮಕೈಗೊಳ್ಳಬೇಕು.


ಬೀದಿನಾಯಿಗಳು ಹಾಗೂ ಬೀಡಾಡಿ ದನಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

ಕಟ್ಟಡ ನಿರ್ಮಾಣಕ್ಕೆ ಗ್ರೌಂಡ್ ಪ್ಲಸ್ 6 ಮಹಡಿಗಳವರೆಗೆ ಅನುಮತಿ ನೀಡುವ ಕುರಿತು ಕ್ರಮಕೈಗೊಳ್ಳಬೇಕು.

ಬಾಗಲಕೋಟೆ ರಸ್ತೆ ಹಾಗೂ ಮನಗೂಳಿ ರಸ್ತೆಗಳ ಅಗಲೀಕರಣಕ್ಕೆ ಕ್ರಮ ವಹಿಸಬೇಕು.ರೈತ ಭಾರತ ಪಕ್ಷವು ರೈತರು ಮತ್ತು ಸೈನಿಕರ ಹಿತಾಸಕ್ತಿಗಾಗಿ ಸ್ಥಾಪನೆಯಾಗಿದೆಂದು ತಿಳಿಸಿರುವ ಪಕ್ಷದ ಮುಖಂಡರು, ರೈತ ಸಂಘಟನೆಗಳು, ಜನಪರ ಸಾಮಾಜಿಕ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟದ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು. ಸೀರೆ, ಕುಕ್ಕರ್, ಮದ್ಯ, ಹಣ ಹಾಗೂ ಕುಟುಂಬ ರಾಜಕಾರಣದ ಆಮಿಷಗಳನ್ನು ತಿರಸ್ಕರಿಸಿ, ನೀರು, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು.

-ಮಲ್ಲಿಕಾರ್ಜುನ ಬಿ.ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ.