ಕನ್ನಡಪ್ರಭ ವಾರ್ತೆ ಮೂಡಲಗಿ
ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗಬೇಕು. ಅನ್ನದಾತನ ಶ್ರಮಕ್ಕೆ ತಕ್ಕ ಗೌರವ ದೊರೆಯಬೇಕು ಎಂದು ಆಗ್ರಹಿಸಿ ಗುರ್ಲಾಪೂರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ರೈತ ನಾಯಕ ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಬೆಂಬಲ ವ್ಯಕ್ತಪಡಿಸಿದರು.ತಾಲೂಕಿನ ಗುರ್ಲಾಪೂರದಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಅನ್ನ ನೀಡುವ ರೈತನೇ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ರೈತರ ಶ್ರಮಕ್ಕೆ ತಕ್ಕ ಸ್ಥಾನಮಾನ ಮತ್ತು ಗೌರವವನ್ನು ಆಳುವ ಸರ್ಕಾರಗಳು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸುವ ಸಂದರ್ಭದಲ್ಲಿ ಸಂಘಟನೆಗಳ ನಡುವಿನ ಒಗ್ಗಟ್ಟು ಅತ್ಯಂತ ಮುಖ್ಯವಾಗಿದೆ. ರಾಜ್ಯದಲ್ಲಿ ಹಲವು ರೈತ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ಅವೆಲ್ಲವೂ ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಚುಕ್ಕಿ ಆಶಿಸಿದರು.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ರೈತ ಮುಖಂಡ ಚೂನಪ್ಪ ಪೂಜೇರಿ ಮಾತನಾಡುವ ಸಂದರ್ಭದಲ್ಲಿ ಕೆಲವರು ಗಂಭೀರ ಚರ್ಚೆಗೆ ಸಹಕರಿಸದೆ ಕುಚೇಷ್ಟೆ ಮಾಡಿದವರಂತೆ ವರ್ತಿಸಿದರು. ರೈತರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಉದ್ದೇಶ ಅವರಲ್ಲಿ ಕಾಣಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಆದರೆ, ಈ ಘಟನೆಯ ಬಳಿಕ ರಾಜ್ಯದ ವಿವಿಧ ಭಾಗಗಳ ರೈತ ಸಂಘಟನೆಗಳು ಒಗ್ಗೂಡಿ ಒಂದೇ ಮನವಿ ಸಲ್ಲಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ರಚಿಸಿ, ಸತತ ಸಭೆಗಳ ಮೂಲಕ ರೈತರನ್ನು ಒಗ್ಗೂಡಿಸಿ ಸಂಘಟಿತ ಶಕ್ತಿಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಚೂನಪ್ಪ ಪೂಜೇರಿ ಕಾರ್ಯಕ್ಕೆ ಮೆಚ್ಚುಗೆ:
ತಮ್ಮ ತಂದೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು 1980ರ ದಶಕದಲ್ಲಿ ಕಟ್ಟಿದ ರೈತ ಸಂಘಟನೆಯನ್ನು ಪುನಃ ಬಲಪಡಿಸುವ ನಿಟ್ಟಿನಲ್ಲಿ ಚೂನಪ್ಪ ಪೂಜೇರಿ ಅವರು ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಇಡೀ ದೇಶಕ್ಕೆ ಮಾದರಿಯಾಗುವ ರೈತ ಹೋರಾಟವನ್ನು ರೂಪಿಸಲು ಅವರು ಶ್ರಮಿಸುತ್ತಿರುವುದು ಸಂತೋಷದ ಸಂಗತಿ. ತಮ್ಮ ತಂದೆಯವರು ಇಂದು ಬದುಕಿದ್ದರೆ ಈ ಬೆಳವಣಿಗೆ ಕಂಡು ಬಹಳ ಸಂತೋಷಪಡುತ್ತಿದ್ದರು ಎಂದರು.ರೈತ ಸಂಘಟನೆಯ ಶಕ್ತಿಯನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಸಂಘಟನೆಯೊಳಗೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಒಗ್ಗಟ್ಟನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಂಘಟನೆಯ ಶಕ್ತಿಯನ್ನು ದುರ್ಬಲಗೊಳಿಸುವ ಕುತಂತ್ರಗಳಿಗೆ ಅವಕಾಶ ನೀಡಬಾರದು ಎಂದು ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಅವರಿಗೆ ಸಲಹೆ ನೀಡಿದರು.
ರೈತರ ಹಕ್ಕುಗಳ ರಕ್ಷಣೆಗೆ ಸಂಘಟನೆಗಳ ಒಗ್ಗಟ್ಟು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಹಾಗೂ ಸರ್ಕಾರದ ಜವಾಬ್ದಾರಿಯುತ ಸ್ಪಂದನೆ ಅತ್ಯಗತ್ಯ ಎಂಬ ಸಂದೇಶವನ್ನು ಚುಕ್ಕಿ ನಂಜುಂಡಸ್ವಾಮಿ ತಮ್ಮ ಭಾಷಣದ ಮೂಲಕ ಸಾರಿದರು.ಈ ವೇಳೆ ಮಾಜಿ ಸಚಿವ ಶಶಿಕಾಂತ ನಾಯಿಕ, ಚೂನಪ್ಪ ಪೂಜೇರಿ, ಶಶಿಕಾಂತ ಗುರೂಜಿ ಸೇರಿದಂತೆ ವಿವಿಧ ಜಿಲ್ಲೆ ಮತ್ತು ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಶ್ರೀಗಳು ಉಪಸ್ಥಿತರಿದ್ದರು.
ಕಬ್ಬು ಬೆಳೆಯಲು ರೈತರು ಮಾಡುವ ಖರ್ಚು, ಶ್ರಮ ಹಾಗೂ ಕೃಷಿ ಚಟುವಟಿಕೆಗಳ ವೆಚ್ಚವನ್ನು ಪರಿಗಣಿಸಿದರೆ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ಕೂಡ ಸಾಕಾಗುವುದಿಲ್ಲ. ವಾಸ್ತವವಾಗಿ ₹10,000 ಬೆಲೆ ಸಿಗಬೇಕು ಎಂಬುದು ರೈತರ ನಿರೀಕ್ಷೆಯಾಗಿದೆ. ಆದರೆ, ₹5,500 ನೀಡಲು ಕೂಡ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಿಂದೇಟು ಹಾಕುತ್ತಿರುವಾಗ, ₹10,000 ಬೆಲೆ ಕೇಳುವುದಾದರೂ ಹೇಗೆ ಎಂಬ ಅಸಹಾಯಕ ಸ್ಥಿತಿ ರೈತರಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ರೈತರ ಸಂಕಷ್ಟಗಳು ಸರ್ಕಾರಗಳಿಗೆ ತಿಳಿದಿದ್ದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು.
-ಚುಕ್ಕಿ ನಂಜುಂಡಸ್ವಾಮಿ, ರೈತ ಹೋರಾಟಗಾರ್ತಿ