ಕನ್ನಡಪ್ರಭ ವಾರ್ತೆ ಅಥಣಿ

ಪ್ರಕೃತಿ ಸಂರಕ್ಷಣೆ ಹಾಗೂ ಗುರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ 2008ರ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳು ನದಿ ಇಂಗಳಗಾಂವ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ 200 ಸಸಿಗಳನ್ನು ನೆಟ್ಟು ಗುರುಸ್ಮೃತಿ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮ ಆಚರಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಗುರುಲಿಂಗದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಗುರುಗಳನ್ನು ಸ್ಮರಿಸುವ ಜೊತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಿರುವ ಸ್ನೇಹ ಬಳಗ ಗ್ರಾಮದ ಶಕ್ತಿಯಾಗಿದೆ ಎಂದರು.ನಿವೃತ್ತ ಶಿಕ್ಷಕ ಜಿ.ಆರ್. ಆಸಂಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸುವುದು ಶಿಕ್ಷಕರ ಕರ್ತವ್ಯ. ತಮ್ಮ ಶಿಷ್ಯರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಶಿಕ್ಷಕ ಚಂದ್ರಶೇಖರ ಲಮಾಣಿ ಪರಿಸರ ಸಂರಕ್ಷಣೆ ಮತ್ತು ಮಾನವೀಯ ಮೌಲ್ಯಗಳ ಮಹತ್ವ ತಿಳಿಸಿದರೆ, ಶಿಕ್ಷಕ ಚಂದ್ರಶೇಖರ ಗಸ್ತಿ ವಿದ್ಯಾರ್ಥಿಗಳ ಸಂಸ್ಕಾರ ಹಾಗೂ ಶಿಕ್ಷಕರ ಮೇಲಿನ ಪ್ರೀತಿಯನ್ನು ಶ್ಲಾಘಿಸಿದರು. ಡಯಟ್ ಉಪನ್ಯಾಸಕ ಸಲೀಂ ನದಾಫ್‌ ತಮ್ಮ ಶಿಕ್ಷಕ ವೃತ್ತಿಯ ಅನುಭವ ಹಂಚಿಕೊಂಡರು. ಶಿಕ್ಷಕಿ ಗೀತಾ ಪಾಟೀಲ ಪ್ರಕೃತಿ ಪ್ರೀತಿಯೇ ಸಂಸ್ಕಾರದ ಪ್ರತೀಕ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕರ ಕುಟುಂಬದವರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡರು. ಇದೇ ವೇಳೆ ನಿಧನರಾದ ಶಿಕ್ಷಕ ನೀಲಕಂಠ ಮನವಾಡೆ ಮತ್ತು ವಿದ್ಯಾರ್ಥಿನಿ ಯಲ್ಲವ್ವ ಶಾಬಣ್ಣವರ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಿಕ್ಷಕರರಾದ ಗೀತಾ ಪಾಟೀಲ, ಅಣ್ಣಾಸಾಹೇಬ್ ಕಾಂಬಳೆ, ಸಂತರಾಮ ಹೆಬ್ಬಾಳೆ, ನರಸಿಂಹ ಉಗಾರೆ ಅಭಿಪ್ರಾಯ ಹಂಚಿಕೊಂಡರು. ನಿವೃತ ಸಿಪಾಯಿ ಭರತೇಶ ಸನದಿ ಹಾಗೂ ಶಿಕ್ಷಕರ ಕುಟುಂಬದವರು ಹಾಗೂ 2008ರ ಬ್ಯಾಚ್‌ನ ಸ್ನೇಹ ಬಳಗ, ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು. ‌