ಹಬ್ಬದ ಹೊರೆಯ ಜೊತೆಗೆ ಬಿಎಂಟಿಸಿಯ ಬರೆ!

| Published : Jan 14 2024, 01:32 AM IST

ಸಾರಾಂಶ

ರಾಮನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಕಾರಣ ಪುರುಷ ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಹೊರೆಯ ಜೊತೆಗೆ ಬಿಎಂಟಿಸಿ ಬರೆಯೂ ಬೀಳುತ್ತಿದೆ.

ರಾಮನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಕಾರಣ ಪುರುಷ ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಹೊರೆಯ ಜೊತೆಗೆ ಬಿಎಂಟಿಸಿ ಬರೆಯೂ ಬೀಳುತ್ತಿದೆ.

ಹಬ್ಬ ಹರಿದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಮೂರು ದಿನಗಳ ಮಟ್ಟಿಗೆ ಬಿಎಂಟಿಸಿ ಹೆಚ್ಚುವರಿ 40 ಬಸ್ಸುಗಳನ್ನು ಬೆಂಗಳೂರಿನಿಂದ ಮೈೂಸೂರು, ಕೊಳ್ಳೆಗಾಲ ಸೇರಿದಂತೆ ಇತರೆ ಮಾರ್ಗದ ರಸ್ತೆಗಿಳಿಸಿ, ಹಗಲು ದರೋಡೆಗೆ ಇಳಿದಿದೆ ಎಂಬ ಮಾತುಗಳು ಪ್ರಯಾಣಿಕರಿಂದ ಕೇಳಿ ಬರುತ್ತಿದೆ.

ಕೆಎಸ್ ಆರ್ ಟಿಸಿ ಬಸ್ಸುಗಳಿಗೆ ಹೋಲಿಕೆ ಮಾಡಿದಲ್ಲಿ ಬಿಎಂಟಿಸಿ ಬಸ್ಸುಗಳಲ್ಲಿ 8ರಿಂದ 10 ರುಪಾಯಿ ಹೆಚ್ಚುವರಿ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಬಿಎಂಟಿಸಿ ಬಸ್ಸುಗಳ ದುಬಾರಿ ಟಿಕೆಟ್ ದರ ಪುರುಷ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಪ್ರಯಾಣಿಕರಿಗೆ ಬಸ್ ಟಿಕೆಟ್ ಶಾಕ್ :

ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಬೆಂಗಳೂರು ಸ್ಯಾಟ್ ಲೈಟ್ - ಮೈಸೂರು ಪ್ರಯಾಣ ದರ 141 ರುಪಾಯಿಗಳಾದರೆ ಬಿಎಂಟಿಸಿ ಬಸ್ಸಿನಲ್ಲಿ 150 ರುಪಾಯಿ ನಿಗದಿ ಪಡಿಸಲಾಗಿದೆ. ಇನ್ನು ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಬೆಂಗಳೂರು - ರಾಮನಗರ 45 ರು., ಬೆಂಗಳೂರು - ಚನ್ನಪಟ್ಟಣ - 57 ರು., ಬೆಂಗಳೂರು - ಮದ್ದೂರು - 71ರು., ಬೆಂಗಳೂರು - ಮಂಡ್ಯಕ್ಕೆ 96 ರು. ಇದೆ. ಆದರೆ, ಬಿಎಂಟಿಸಿ ಬಸ್ಸುಗಳಲ್ಲಿ ಬೆಂಗಳೂರು - ರಾಮನಗರಕ್ಕೆ 55ರು., ಬೆಂಗಳೂರು - ಚನ್ನಪಟ್ಟಣ - 65 ರು., ಬೆಂಗಳೂರು - ಮದ್ದೂರು - 85 ರು., ಬೆಂಗಳೂರು - ಮಂಡ್ಯಕ್ಕೆ 105 ರುಪಾಯಿ ದರ ನಿಗದಿ ಆಗಿದೆ.

ಬೆಂಗಳೂರು - ಮೈಸೂರು ಮಾರ್ಗದಲ್ಲಿ ಬರುವ ಎಲ್ಲ ಊರುಗಳ ಪ್ರಯಾಣ ದರ 8 ರಿಂದ 10 ರುಪಾಯಿ ಹೆಚ್ಚಳವಾಗಿದೆ. ಕೆಎಸ್ಸಾರ್ಟಿಸಿ ಬಸ್ಸುಗಳು ಇಲ್ಲದ ಕಾರಣ ಪುರುಷ ಪ್ರಯಾಣಿಕರು ದುಬಾರಿ ಹಣ ತೆತ್ತಿ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ.

ಅಧಿಕಾರಿಗಳಲ್ಲಿಯೇ ಟಿಕೆಟ್ ದರದ ಗೊಂದಲ:

ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ದರ ವ್ಯತ್ಯಾಸ ಕುರಿತು ಉಭಯ ಸಂಸ್ಥೆಗಳ ಅಧಿಕಾರಿಗಳಲ್ಲಿಯೇ ಗೊಂದಲ ಮೂಡಿದೆ. ಆದರೆ, ಬಿಎಂಟಿಸಿ ಮಾತ್ರ ದುಬಾರಿ ಹಣ ಪಡೆದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಕೆಎಸ್ಸಾರ್ಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಬಿಎಂಟಿಸಿಯವರು ಕೆಎಸ್ಸಾರ್ಟಿಸಿ ಬಸ್ಸಿನ ಪ್ರಯಾಣ ದರವನ್ನೇ ಪಡೆಯಬೇಕು. ಹೆಚ್ಚುವರಿ ಪ್ರಯಾಣ ದರ ಪಡೆಯುವಂತಿಲ್ಲ ಎನ್ನುತ್ತಾರೆ. ಇನ್ನು ಬಿಎಂಟಿಸಿ ಅಧಿಕಾರಿಗಳನ್ನು ಕೇಳಿದರೆ ಕೆಎಸ್ಸಾರ್ಟಿಸಿ ಸಂಸ್ಥೆ ನೀಡಿರುವ ಪ್ರಯಾಣ ದರದ ಅನ್ವಯವೇ ಟಿಕೆಟ್ ದರ ನಿಗದಿ ಪಡಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕಂಡೆಕ್ಟರ್ ಜೊತೆ ಪ್ರಯಾಣಿಕರ ವಾಕ್ಸಮರ:

ಇನ್ನು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರು ಟಿಕೆಟ್ ದರ ದುಬಾರಿ ಪಡೆಯುತ್ತಿರುವುದಕ್ಕೆ ಕಂಡೆಕ್ಟರ್ ಜೊತೆಗೆ ವಾಕ್ಸಮರಕ್ಕೆ ಇಳಿಯುತ್ತಿದ್ದಾರೆ. ಪ್ರಯಾಣ ದರ ದುಬಾರಿ ಏಕೆಂದು ಪ್ರಶ್ನಿಸುವ ಪ್ರಯಾಣಿಕನನ್ನು ಕಂಡೆಕ್ಟರ್ ರಸ್ತೆ ಮಧ್ಯೆಯೇ ಇಳಿಸಿ ಹೋಗುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಹಬ್ಬ ಹರಿದಿನಗಳು ಬಂತಂದರೆ ಸಾಕು ಖಾಸಗಿ ಬಸ್ಸುಗಳಿಂದ ಹಗಲು ದರೋಡೆ ಶುರುವಾಗುತ್ತದೆ. ಸಾಲುಸಾಲು ರಜೆ ಅಂತ ಗೊತ್ತಾದರೆ ಎರಡು ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ಸುಲಿಗೆ ಶುರುವಾಗುತ್ತೆ. ಆದರೆ, ಸಂಕ್ರಾಂತಿ ಹಬ್ಬಕ್ಕೆಂದು ಮನೆ ಕಡೆ ಹೊಗಲು ಸಿದ್ದವಾಗಿರೋರಿಗೆ ಬಿಎಂಟಿಸಿ ಬಸ್ ಗಳಿಂದಲೂ ಶಾಕ್ ನೀಡುತ್ತಿದೆ.

ಖಾಸಗಿ ಬಸ್ ಗಳು ಪ್ರಯಾಣಿಕರಿಂದ ಸುಲಿಗೆಗೆ ಇಳಿದರೆ ಸಾರಿಗೆ ಇಲಾಖೆ ಕ್ರಮ ವಹಿಸುತ್ತದೆ. ಆದರೆ, ಇಲ್ಲಿ ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆ ಮಾತಿನಂತೆ ಬಿಎಂಟಿಸಿ ಪ್ರಯಾಣಿಕರಿಂದ ಹಗಲು ದರೋಡೆ ನಡೆಸುತ್ತಿದ್ದರೂ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.

ಕೋಟ್ .............

ಸಂಕ್ರಾಂತಿ ಹಬ್ಬದ ಕಾರಣ ಪ್ರಯಾಣಿಕರ ದೃಷ್ಟಿಯಿಂದ ಬೆಂಗಳೂರು - ಮೈಸೂರು ಮಾರ್ಗದಲ್ಲಿ ಬಿಎಂಟಿಸಿ ಹೆಚ್ಚುವರಿ ಬಸ್ ಗಳನ್ನು ಆಪ್ ರೇಟ್ ಮಾಡಲಾಗುತ್ತಿದೆ. ಕೆಎಸ್‌ ಆರ್ ಟಿಸಿ ಸಂಸ್ಥೆ ನೀಡಿರುವ ಪ್ರಯಾಣ ದರವನ್ನೇ ಬಿಎಂಟಿಸಿ ಬಸ್ಸುಗಳಲ್ಲೂ ನಿಗದಿ ಪಡಿಸಲಾಗಿದೆ. ಪ್ರಯಾಣ ದರದಲ್ಲಿ ವ್ಯತ್ಯಾಸ ಉಂಟಾಗಲು ಕಾರಣ ಗೊತ್ತಿಲ್ಲ.

- ಪ್ರಭಾಕರ್ ರೆಡ್ಡಿ, ಮುಖ್ಯ ಸಂಚಾರಿ ವ್ಯವಸ್ಥಾಪಕರು, ಬಿಎಂಟಿಸಿ.

ಕೋಟ್ ...........

ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ನಿಗದಿ ಪಡಿಸಿರುವ ಪ್ರಯಾಣ ದರವನ್ನೇ ಬಿಎಂಟಿಸಿ ಬಸ್ಸುಗಳು ಪ್ರಯಾಣಿಕರಿಂದ ಪಡೆಯಬೇಕು. ದುಬಾರಿ ಟಿಕೆಟ್ ದರ ಪಡೆಯಲು ಅವಕಾಶ ಇಲ್ಲ. ಈವರೆಗೂ ಯಾವ ಪ್ರಯಾಣಿಕರಿಂದಲೂ ದೂರು ಬಂದಿಲ್ಲ. ಸಂಸ್ಥೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು.

-ಎಂ.ಜಗದೀಶ್, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕೆಎಸ್ ಆರ್ ಟಿಸಿ, ರಾಮನಗರ

13ಕೆಆರ್ ಎಂಎನ್‌ 3,4,5.ಜೆಪಿಜಿ

3,4.ಬೆಂಗಳೂರು - ಮೈಸೂರು ಮಾರ್ಗದಲ್ಲಿ ಬಿಎಂಟಿಸಿ ಬಸ್ ಗಳ ಸಂಚಾರ.

5.ಬಿಎಂಟಿಸಿ ಬಸ್ಸಿನಲ್ಲಿ ಮಂಡ್ಯದಿಂದ ಮದ್ದೂರಿಗೆ 27 ರು.ಬದಲಿಗೆ 35 ರು. ಪಡೆದಿರುವ ಟಿಕೆಟ್.